Site icon BosstvKannada

ಭಾರತಕ್ಕೆ ಮಹತ್ವದ ಭರವಸೆ ನೀಡಿದ ರಷ್ಯಾ: ಯಾವೆಲ್ಲಾ ವಿಚಾರದಲ್ಲಿ ಭಾರತಕ್ಕೆ ಲಾಭ? ಚೀನಾ, ಪಾಕ್ ಗಢಗಢ!

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿದ್ದು, ಇಂದು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಅಮೇರಿಕಾದ ವಿಪರೀತ ತೆರಿಗೆ, ಚೀನಾದ ಉದ್ಧಟತನ, ಪಾಕಿಸ್ತಾನದ ನರಿ ಬುದ್ಧಿಯ ಮಧ್ಯೆ ರಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ಹಲವು ವಿಷಯಗಳಿಂದ ಪ್ರಾಮುಖ್ಯತೆ ಪಡೆದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2030ರವರೆಗೆ ಆರ್ಥಿಕ ಸಹಕಾರಕ್ಕೆ ಒಪ್ಪಂದ ಆಗಿದೆ. ಭಾರತ ರಷ್ಯಾ ಬ್ಯುಸಿನೆಸ್ ಫೋರಂ ಸಭೆ (India Russia Business Forum) ಆರಂಭಕ್ಕೆ ಮುನ್ನ ಈ ವಿಷನ್ 2030 ದಾಖಲೆಗೆ ಸಹಿ ಹಾಕಿದ್ದಾರೆ. 2030ರ ವಿಷನ್ ಡಾಕ್ಯುಮೆಂಟ್ನಲ್ಲಿ ಆರ್ಥಿಕ ಸಹಕಾರ ಮುಂದುವರಿಕೆಗೆ ಒಂದು ರೋಡ್ಮ್ಯಾಪ್ ಸಿದ್ಧವಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ ಅಧ್ಯಕ್ಷರು ಹಾಗೂ ನಾನು ಇಂದು ಬ್ಯುಸಿನೆಸ್ ಫೋರಂನಲ್ಲಿ ಭಾಗಿಯಾಗಲಿದ್ದೇವೆ. ಜಂಟಿಯಾಗಿ ಯೂರಿಯಾ ಉತ್ಪಾದನೆ ಮಾಡಲು ಎರಡೂ ದೇಶಗಳು ಪ್ರಯತ್ನಿಸಲಿವೆ. ಈ ಪ್ಲಾಟ್ಫಾರ್ಮ್ನಿಂದ ನಮ್ಮ ಬ್ಯುಸಿನೆಸ್ ಸಂಬಂಧಗಳು ಬಲಪಡಬಹುದು. ಪರಸ್ಪರ ಉತ್ಪಾದನೆ ಮತ್ತು ನಾವೀನ್ಯತೆಗಳಿಗೆ ಹೊಸ ದಾರಿಗಳು ಸಿಗಬಹುದು ಎಂದು ಭಾವಿಸಿದ್ದೇನೆ. ಎರಡೂ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೊಸ ಹೆಜ್ಜೆಗಳನ್ನು ಇಡುತ್ತಿವೆ ಎಂದು ಹೇಳಿದ್ದಾರೆ.

ರಷ್ಯನ್ ನಾಗರಿಕರು ಭಾರತಕ್ಕೆ ಬರುವುದಿದ್ದರೆ ಉಚಿತವಾದ 30 ದಿನ ಇ-ಟೂರಿಸ್ಟ್ ವೀಸಾ ಹಾಗೂ 30 ದಿನ ಗ್ರೂಪ್ ಟೂರಿಸ್ಟ್ ವೀಸಾ ನೀಡುವ ಸೌಕರ್ಯವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಕೂಡ ಪ್ರಧಾನಿ ಹೇಳಿದ್ದಾರೆ. ಅಲ್ಲದೇ, ಪರಮಾಣು ವಿಚಾರದಲ್ಲಿ ಕೂಡ ಮಹತ್ವದ ನಿರ್ಧಾರಕ್ಕೆ ಉಭಯ ನಾಯಕರು ಬಂದಿದ್ದಾರೆ.

ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಮೂರನೇ ರಿಯಾಕ್ಟರ್‌ನ ಆರಂಭಿಕ ಲೋಡ್‌ಗಾಗಿ ಪರಮಾಣು ಇಂಧನದ ಮೊದಲ ಹಂತದಲ್ಲಿ ಸರಕನ್ನು ತಲುಪಿಸಲಾಗಿದೆ ಎಂದು ರಷ್ಯಾದ ಸರ್ಕಾರಿ ಪರಮಾಣು ನಿಗಮ ತಿಳಿಸಿದೆ.
ರೊಸಾಟಮ್‌ನ ಪರಮಾಣು ಇಂಧನ ವಿಭಾಗವು ನಿರ್ವಹಿಸುವ ಸರಕು ವಿಮಾನ ನೊವೊಸಿಬಿರ್ಸ್ಕ್ ಕೆಮಿಕಲ್ ಕಾನ್ಸೆಂಟ್ರೇಟ್ಸ್ ಪ್ಲಾಂಟ್‌ನಿಂದ ತಯಾರಿಸಲ್ಪಟ್ಟ ಇಂಧನ ಅಸೆಂಬ್ಲಿಗಳನ್ನು ಭಾರತದ ತಮಿಳುನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿಗಮವು ಹೇಳಿಕೆಯಲ್ಲಿ ಹೇಳಿದೆ.

2024 ರಲ್ಲಿ ಎರಡೂ ರಾಷ್ಟ್ರಗಳು ಸಹಿ ಮಾಡಿದ ಒಪ್ಪಂದದ ಅಡಿಯಲ್ಲಿ ಈಗ ಇಂಧನ ಸಾಗಾಣಿಕೆ ಆಗಿದೆ. ಇದರಲ್ಲಿ ಕೂಡಂಕುಳಂ ಸ್ಥಾವರದ ಮೂರನೇ ಮತ್ತು ನಾಲ್ಕನೇ VVER-1000 ರಿಯಾಕ್ಟರ್‌ಗಳಿಗೆ ಆರಂಭಿಕ ಲೋಡಿಂಗ್‌ನಿಂದ ಪ್ರಾರಂಭವಾಗುವ ಪೂರ್ಣ ಅವಧಿಗೆ ಇಂಧನ ಪೂರೈಕೆ ಮಾಡುವ ಒಪ್ಪಂದವೂ ಸಹ ಸೇರಿದೆ. ಕೂಡಂಕುಳಂನಲ್ಲಿರುವ ಭಾರತದ ಅತಿದೊಡ್ಡ ಅಣುವಿದ್ಯುತ್ ಸ್ಥಾವರವನ್ನು ಅದರ ಪೂರ್ಣ ಸಾಮರ್ಥ್ಯಕ್ಕೆ ಕೊಂಡೊಯ್ಯಲು ರಷ್ಯಾ ಬದ್ಧವಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ಆರು ರಿಯಾಕ್ಟರ್‌ಗಳನ್ನು ಹೊಂದಿರುವ ಈ ಸ್ಥಾವರದಲ್ಲಿ, ಈಗಾಗಲೇ ಎರಡು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಂಧನ ಜಾಲಕ್ಕೆ ಸಂಪರ್ಕ ಕಲ್ಪಿಸಿವೆ. ಈ ಸ್ಥಾವರವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ, ಭಾರತದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಇದು ಮಹತ್ವದ ಕೊಡುಗೆ ನೀಡಲಿದೆ ಎಂದು ಕೂಡ ಅವರು ಅಭಿಪ್ರಾಯ ಪಟ್ಟಿದ್ದಾರೆ.

Exit mobile version