Site icon BosstvKannada

ಸರ್ಕಾರಿ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು RSS ಪ್ರಯತ್ನ : ರಾಹುಲ್‌ ಗಾಂಧಿ ಆರೋಪ

ಬೆಂಗಳೂರು : ಲೋಕಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಎಸ್‌ಐಆರ್‌ ಚರ್ಚೆ ವೇಳೆ ಲೋಕಸಭೆ ವಿಪಕ್ಷ ನಾಯಕ ಆರ್‌ಎಸ್‌ಎಸ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸದನದ ಕೋಲಾಹಲಕ್ಕೆ ಕಾರಣವಾಯಿತು. ಚುನಾವಣಾ ಸುಧಾರಣೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಾಹುಲ್ ಗಾಂಧಿ ಮಾತನಾಡಿ, ಆರ್‌ಎಸ್‌ಎಸ್‌ ಸಮಾನತೆಯನ್ನು ನಂಬುವುದಿಲ್ಲ. ಅವರು ಶ್ರೇಣಿಕೃತ ವ್ಯವಸ್ಥೆಯನ್ನು ನಂಬುತ್ತಾರೆ. ತಾವು ಆ ಶ್ರೇಣಿಕೃತ ವ್ಯವಸ್ಥೆಯಲ್ಲಿ ಮೇಲಿರಬೇಕು ಎಂದು ಬಯಸುತ್ತಾರೆ ಎಂದು ಆರ್‌ಎಸ್‌ಎಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸಮಾನ ಹಕ್ಕುಗಳ ನಿರ್ಮೂಲನೆಯ ಕಡೆಗೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಮತದಾನವು ಪ್ರತಿಯೊಬ್ಬ ನಾಗರಿಕರು ಸಮಾನರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ, ಇದು ಆರ್‌ಎಸ್‌ಎಸ್‌ಗೆ ಸಿದ್ಧಾಂತಕ್ಕೆ ಪರ್ಯಾಯವಾಗಿದೆ, ಅವರು ಸಮಾನತೆಯನ್ನು ನಂಬುವುದಿಲ್ಲ. ಅವರು ಶ್ರೇಣೀಕೃತ ವ್ಯವಸ್ಥೆಯನ್ನು ನಂಬುತ್ತಾರೆ. ಈ ವ್ಯವಸ್ಥೆಯಲ್ಲಿ ತಾವೇ ಮೇಲೆ ಇರಬೇಕು ಎಂದು ನಂಬುತ್ತಾರೆ ಎಂದ ಅವರು, ನಾಥೂರಾಮ್ ಗೋಡ್ಸೆಯಿಂದ ಮಹಾತ್ಮಾ ಗಾಂಧಿಯವರ ಹತ್ಯೆಯಾದ ಘಟನೆಯನ್ನು ನೆನಪಿಸಿಕೊಂಡರು.

ಮಹಾತ್ಮ ಗಾಂಧಿಯವರ ವಿಚಾರಗಳನ್ನು ಪ್ರತಿಪಾದಿಸುತ್ತಾ ಚುನಾವಣೆ ಮತ್ತು ಸಂಸ್ಥೆಗಳ ನ್ಯಾಯಸಮ್ಮತತೆಯ ಕುರಿತು ವಿಚಾರ ಮಂಡಿಸಿದ ಅವರು, ಮಹಾತ್ಮ ಗಾಂಧಿಯವರು ಖಾದಿ ಬಟ್ಟೆಯ ಕುರಿತು ಹೊಂದಿದ್ದ ಸಕಾರಾತ್ಮಕ ನಿಲುವುಗಳನ್ನು ತಿಳಿಸಿದರು. ಖಾದಿ ಬಟ್ಟೆಯೂ ಸ್ವಾವಲಂಬನೆಯ ಕಲ್ಪನೆಯಾಗಿದ್ದು, ಕೈಮಗ್ಗದಿಂದ ತಯಾರಿಸುವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಗಾಂಧಿಜೀಯವರು ಖಾದಿಗೆ ಏಕೆ ಅಷ್ಟೊಂದು ಒತ್ತು ಕೊಟ್ಟರು. ಅವರು ಏಕೆ ಕೇವಲ ಖಾದಿಯನ್ನೇ ಧರಿಸುತ್ತಿದ್ದರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?, ಏಕೆಂದರೆ, ಖಾದಿ ಕೇವಲ ಬಟ್ಟೆಯಲ್ಲ, ಖಾದಿ ಭಾರತದ ಜನರ ಅಭಿವ್ಯಕ್ತಿ, ನೀವು ಯಾವುದೇ ರಾಜ್ಯಕ್ಕೆ ಹೋದರೂ, ವಿಭಿನ್ನ ಬಟ್ಟೆಗಳನ್ನು ಕಾಣುತ್ತೀರಿ. ಆ ಬಟ್ಟೆಗಳು ಜನರನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಬಟ್ಟೆಯಲ್ಲೂ ಸಾವಿರಾರು ಎಳೆಗಳು ಪರಸ್ಪರ ಅಪ್ಪಿಕೊಂಡಿವೆ. ಹಾಗಾಗಿ, ಖಾದಿ ಸಮಾನತೆಯ ಸಂಕೇತ ಮತ್ತು ಭಾರತದ ಚೈತನ್ಯ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್‌ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಗಾಂಧಿ ಆರೋಪಗಳಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು, ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದರು.

Exit mobile version