ಎಲ್ಲಿ ನೋಡಿದ್ರೂ ಕೇಸರಿ ಧ್ವಜಗಳ ಹಾರಾಟ.. ನಮ್ಮ ನಡಿಗೆ ಧರ್ಮದೆಡೆಗೆ ಎಂಬ ಘೋಷವಾಕ್ಯಗಳ ಗರ್ಜನೆ.. ಹಿಂದುತ್ವದ ಭದ್ರಕೋಟೆ ಧರ್ಮಸ್ಥಳದಲ್ಲಿ ಧರ್ಮಸ್ಥಳ ಚಲೋ ಸಮಾವೇಶ ಝೇಂಕರಿಸಿದ್ದು ಸುಳ್ಳಲ್ಲ.. ಹಿಂದೆಂದೂ ಕಾಣದ ರೀತಿ ಬಿಜೆಪಿ ನಾಯಕರು ಒಟ್ಟುಗೂಡಿ ಯಾತ್ರೆ ನಡೆಸಿದ್ದು, ಒಡಕು ಮುರಿದು ಹೊಸ ಒಗ್ಗಟ್ಟು ಪ್ರದರ್ಶಿಸುವ ಭರವಸೆ ಮೂಡಿತ್ತು.. ಆದ್ರೆ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದವರ ವಿರುದ್ಧ ಯುದ್ಧ ಮಾಡುವ ಸನ್ನಿವೇಶದಲ್ಲಿ ಒಡಕು ಕಾಣಿಸಿದೆ. ಒಗ್ಗಟ್ಟಿನ ಮಂತ್ರ ಜಪಿಸಿದ್ದ ಕೇಸರಿ ಪಡೆಯಲ್ಲೇ ಕಲಹ ಏರ್ಪಟ್ಟಿದೆ..
ಧರ್ಮಸ್ಥಳದಲ್ಲಿ ಹಿಂದುತ್ವ ನಾಯಕರೇ ಮೂಲೆಗುಂಪು..?
ರಾಜ್ಯ ಬಿಜೆಪಿ ವಿಪಕ್ಷವೆನಿಸಿಕೊಂಡ ಮೇಲೆ ಸರ್ಕಾರದ ವಿರುದ್ಧ ವಿಫಲ ಹೋರಾಟ ನಡೆಸಿದ್ದೇ ಹೆಚ್ಚು.. ವಕ್ಫ್ ವಿರುದ್ಧ ಹೋರಾಟ, ಮುಡಾ ಕೇಸ್‌ನಲ್ಲಿ ಪಾದಯಾತ್ರೆ ಎಲ್ಲಾ ಹೋರಾಟದಲ್ಲೂ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಬಿಜೆಪಿ ನಿರೀಕ್ಷೆ ಮಟ್ಟವನ್ನೂ ಮುಟ್ಟಲಿಲ್ಲ.. ಆದ್ರೆ ಧರ್ಮಸ್ಥಳದ ವಿಚಾರದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಬಿಜೆಪಿ ನಾಯಕರು ಹೋರಾಟ ನಡೆಸಿದ್ದನ್ನೂ ನೋಡಿ ಹೊಸ ಚೈತನ್ಯ ಮೂಡುವ ನಿರೀಕ್ಷೆ ಹೆಚ್ಚಿಸಿತ್ತು.. ಸದನದಲ್ಲಿ ಅಬ್ಬರ.. ಸರ್ಕಾರದ ವಿರುದ್ಧ ಅಪಸ್ವರ ಎಲ್ಲವೂ ಬಿಜೆಪಿಯ ಬಲವರ್ಧನೆಯ ಮುನ್ಸೂಚನೆ ನೀಡಿತ್ತು.. ಕೆಲ ನಾಯಕರಂತೂ ಶತಾಯ ಗತಾಯ ನಾವು ಧರ್ಮಸ್ಥಳ, ಹಿಂದುತ್ವದ ಪರ ನಿಲ್ಲುತ್ತೇವೆ ಅಂತ ಧ್ವನಿ ಎತ್ತಿದ್ರು.. ಆದ್ರೆ ಇದೀಗ ಅದೇ ನಾಯಕರನ್ನೇ ಧರ್ಮ ಸಂಘರ್ಷದಲ್ಲಿ ಕಡೆಗಣಿಸಿಲಾಗಿದೆ ಅಂತ ಹೇಳಲಾಗ್ತಿದೆ..
ಗರ್ಜಿಸಿದ್ದ ಹಿಂದುತ್ವ ನಾಯಕರೇ ಸೈಡ್‌ಲೈನ್..?
ಸದನದಲ್ಲಿ ಧರ್ಮಸ್ಥಳ ಪರ ಝೇಂಕರಿಸಿದ್ದು ಅಂದ್ರೆ ಅದು ಶಾಸಕ ಸುನೀಲ್ ಕುಮಾರ್.. ಆದ್ರೆ ಅವರಿಗೇ ಧರ್ಮಸ್ಥಳ ಸಮಾವೇಶದಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ ಅಂತಾ ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.. ಜೊತೆಗೆ ಅವರಿಗೆ ನೀಡಲಾಗಿದ್ದ ಸಹ ಸಂಚಾಲಕ ಜವಾಬ್ದಾರಿಯನ್ನೂ ಅವರು ನಿರಾಕರಿಸಿದ್ದಾರೆ ಅಂತಾ ಹೇಳಲಾಗ್ತಿದೆ.. ಕಾರ್ಯಕ್ರಮದಲ್ಲಿ ಅವರು ಅರ್ಧದಲ್ಲೇ ಹೊರನಡೆದಿದ್ದು, ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ. ಇನ್ನೂ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ಧರ್ಮಸ್ಥಳ ಪರ ಮಾತಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.. ಅವರಿಗೆ ಕೂಡ ಮಾತನಾಡಲು ಅವಕಾಶ ಕೊಡ್ಲಿಲ್ಲ.. ಇನ್ನೂ ಈ ಹಿಂದೆ ಕಾರ್ಯಕರ್ತರನ್ನು ಒಗ್ಗೂಡಿಸಿ ಧರ್ಮಸ್ಥಳ ಪರ ಸಮಾವೇಶ ನಡೆಸಿದ್ದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್‌ರನ್ನು ಸಹಾ ಕಡೆಗಣಿಸಲಾಗಿದೆ ಅಂತ ಹೇಳಲಾಗ್ತಿದೆ.. ಹೀಗಾಗಿ ಸದಾ ಹಿಂದುತ್ವದ ಪರ ಧ್ವನಿ ಎತ್ತುತ್ತಿದ್ದ ಕರಾವಳಿ ಭಾಗದ ನಾಯಕರನ್ನು ವ್ಯವಸ್ಥಿತವಾಗಿಯೇ ಸೈಲೆಂಟ್ ಮಾಡಲು ಸಂಚು ರೂಪಿಸಲಾಗಿದೆ ಅನ್ನೋ ಬಿಸಿ ಬಿಸಿ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ರಾರಾಜಿಸಿವೆ..
ಇನ್ನೂ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ತಮ್ಮ ಭಾಷಣವನ್ನು ಮುಗಿಸಿದ ಕೂಡಲೇ ಬೇರೆ ಯಾವುದೋ ನೆಪವೊಡ್ಡಿ ಸಭಾತ್ಯಾಗ ಮಾಡಿದ್ರು.. ಇದೂ ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.. ಅತ್ತ ಮಾಜಿ ಸಿಎಂ ಸದಾನಂದ ಗೌಡರ ಅನುಪಸ್ಥಿತಿಯಲ್ಲಿ ಎಂಎಲ್‌ಸಿ ಸಿ.ಟಿ. ರವಿ ಅವರಿಗೆ ಮಾತನಾಡಲು ಅವಕಾಶ ಕೊಟ್ಟು ಎರಡ್ಮೂರು ನಿಮಿಷದಲ್ಲಿ ಚೀಟಿ ಕಳಿಸಿ ಭಾಷಣ ನಿಲ್ಲಿಸುವಂತೆ ಸೂಚಿಸಿದ್ದು, ಕೂಡ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿವೆ.. ಇದೇ ವಿಚಾರವಾಗಿ ಸಿ.ಟಿ. ಕೂಡ ಪ್ರತಿಕ್ರಿಯೆ ನೀಡಿದ್ದಾರೆ..
Read Aslo : ಬಿಜೆಪಿಯವರು ಸೌಜನ್ಯ ಪರನಾ? ವೀರೇಂದ್ರ ಹೆಗ್ಗಡೆ ಪರನಾ..? ಬಿಜೆಪಿಗೆ ಸಿದ್ದರಾಮಯ್ಯ ಕೌಂಟರ್!
ಒಟ್ನಲ್ಲಿ, ಧರ್ಮಯುದ್ಧ ಸಾರಿದ್ದ ಕೇಸರಿ ಪಡೆ ಈಗ ಒಡೆದ ಮನೆಯಂತಾಗಿದೆ. ಧರ್ಮಸ್ಥಳದ ನೆಲದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದ್ದ ಬಿಜೆಪಿ ನಾಯಕಲ್ಲೇ ಆಂತರಿಕ ಕಲಹ ಸ್ಫೋಟಗೊಂಡಿದೆ.. ಇದು ಬಿಜೆಪಿಗೆ ಮತ್ತಷ್ಟು ತಲೆಬಿಸಿ ಹೆಚ್ಚಿಸಿದ್ರೆ, ವಿಪಕ್ಷ ನಾಯಕರಿಗೆ ಮತ್ತೊಂದು ಅಸ್ತ್ರ ಕೊಟ್ಟಂತಾಗಿದೆ.

