ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಒಂದಿಲ್ಲೊಂದು ಸಂದಿಗ್ಧತೆ ಕೆಲವು ನಾಯಕರಿಗೆ ಎದುರಾಗುತ್ತಲೇ ಇವೆ. ಇಲ್ಲಿಯವರೆಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಸಿಎಂ ಕುರ್ಚಿ ಫೈಟ್ ನಡೆದಿದ್ದರೆ, ಈಗ ಬಿಜೆಪಿಯಲ್ಲಿ ರೆಬೆಲ್ ಆಟ ಶುರುವಾಗಿದೆ. ಇದು ವಿಜಯೇಂದ್ರಗೆ ಸಂಕಷ್ಟ ತಂದೊಡ್ಡುತ್ತಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ಫೈಟ್ ನಡೆದರೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹೇಗಾದರೂ ಮಾಡಿ ಕೆಳಗೆ ಇಳಿಸಲೇಬೇಕೆಂದು ಬಿಜೆಪಿಯ ರೆಬೆಲ್ ಬಣ ಯತ್ನಿಸುತ್ತಿರುವಂತಿದೆ. ಇದರ ಮಧ್ಯೆ ಎಲ್ಲರ ವಿಶ್ವಾಸ ಗಳಿಸಿಕೊಂಡು ನಾಯಕತ್ವ ಉಳಿಸಿಕೊಳ್ಳಬೇಕೆಂದು ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆ.
ಹೀಗಾಗಿಯೇ ಕಮಲದಲ್ಲೂ ಬಣ ರಾಜಕೀಯದ ಸದ್ದು ಜೋರಾಗಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ವಿಜಯೇಂದ್ರ ವಿರೋಧಿ ಬಣ ಹೈಕಮಾಂಡ್ ನಾಯಕರ ಮಧ್ಯೆ ಹಲವು ಆರೋಪ ಮಾಡಿದೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ನಲ್ಲಿನ ಕುರ್ಚಿ ಗುದ್ದಾಟದ ಫೈಟ್ ಬಹಿರಂಗವಾಗಿಯೇ ನಡೆಯುತ್ತಿತ್ತು. ಆದರೆ, ಈ ಪರಿಸ್ಥಿತಿಯನ್ನು ಬಳಸಿಕೊಳ್ಳಲು ವಿಜಯೇಂದ್ರ ವಿಫಲರಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಹತ್ತಿಕ್ಕಲು ರಚನಾತ್ಮಕ ಹೋರಾಟ ಮಾಡಬೇಕಾಗಿದ್ದ ಕರ್ನಾಟಕ ಬಿಜೆಪಿ ಘಟಕ ಸೋಲು ಕಂಡಿದೆ.
ಕಾಂಗ್ರೆಸ್ಸಿನಲ್ಲಿರುವ ಆಂತರಿಕ ಸಮಸ್ಯೆ, ಕುರ್ಚಿ ಕಿತ್ತಾಟ, ಭ್ರಷ್ಟಾಚಾರದ ಆರೋಪ, ಗ್ಯಾರಂಟಿಯಿಂದಾಗಿ ಕಾಣದ ಅಭಿವೃದ್ದಿ ಕೆಲಸ ಸೇರಿದಂತೆ ಸಾಕಷ್ಟು ವಿಷಯಗಳು ಇದ್ದರೂ ಪ್ರತಿ ಅಸ್ತ್ರ ಬಳಸಲು ಬಿಜೆಪಿ ವಿಫಲವಾಗಿದೆ. ಬಿಜೆಪಿ ವಿಫಲವಾಗಿದೆ ಎಂದರೆ ಅದಕ್ಕೆ ಬಿ.ವೈ. ವಿಜಯೇಂದ್ರ ನೇರ ಹೊಣೆಯಾಗುತ್ತಾರೆ. ಏಕೆಂದರೆ ಅವರೇ ಬಿಜೆಪಿಯ ರಾಜ್ಯಾಧ್ಯಕ್ಷರು. ಅವರೇ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೀದಿಗೆ ಇಳಿಯಬೇಕಿತ್ತು. ಆದರೆ, ವಿಜಯೇಂದ್ರ ಬೀದಿಯಲ್ಲಿ ಕಾಣದೆ, ಜನರಿಗೆ ಕಾಂಗ್ರೆಸ್ ನ ತಪ್ಪು ತೋರಿಸಿಲ್ಲ ಎಂದು ಹಲವು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಹಿಂದೆ ಬಿಜೆಪಿಯಲ್ಲಿ ರೆಬೆಲ್ ಆಗಿ ಕಾಣಿಸಿಕೊಂಡಿದ್ದ ನಾಯಕರೇ ಈಗಲೂ ಈ ಪರಿಸ್ಥಿತಿ ಬಳಸಿಕೊಳ್ಳಲು ಮುಂದಾಗಿದ್ದಾರೆ.
ಹೀಗಾಗಿಯೇ ರಮೇಶ್ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್, ಕುಮಾರ್ ಬಂಗಾರಪ್ಪ, ಎನ್.ಆರ್. ಸಂತೋಷ್, ಶೀಮಂತ್ ಪಾಟೀಲ್ ಸೇರಿದಂತೆ ಹಲವರು ನಾಯಕರು ಈಗಾಗಲೇ ಬಿಜೆಪಿಯಲ್ಲಿ ಬೀಡು ಬಿಟ್ಟು, ವಿಜಯೇಂದ್ರ ಅವರ ಸೋಲನ್ನು ಎಳೆ ಎಳೆಯಾಗಿ ಬಿಚ್ಚಿಡಲು ಕಾಯುತ್ತಿದ್ದಾರೆ. ಅಲ್ಲದೇ, ರಾಜ್ಯ ಹಿರಿಯ ನಾಯಕರು ಹಾಗೂ ಸಂಸದರನ್ನು ಭೇಟಿ ಮಾಡಿ ಕೂಡ ಚರ್ಚೆ ಮಾಡುತ್ತಿದ್ದಾರೆ.
ವಿಜಯೇಂದ್ರ, ಸಂಘಟನೆ ಮಾಡಲು ಎಡವುತ್ತಿದ್ದಾರೆ. ಕಾಂಗ್ರೆಸ್ ನ ತಪ್ಪಿನ ಲಾಭ ಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. ಕಾಂಗ್ರೆಸ್ ವಿರುದ್ದ ಹೋರಾಟ ರೂಪಿಸುತ್ತಿಲ್ಲ. ಸರ್ಕಾರ ಹಾಗೂ ಅದರ ಆಂತರಿಕ ವಿಚಾರ, ಭ್ರಷ್ಟಾಚಾರಗಳನ್ನು ಹೊರಗೆ ಹಾಕಿ ಜನರ ವಿಶ್ವಾಸಗಳಿಸಲು ಯತ್ನಿಸುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಆಕ್ರಮಣಕಾರಿಯಾಗಿ ಕೆಲಸವನ್ನು ಮಾಡುತ್ತಿಲ್ಲ ಎನ್ನುವುದು, ಸಾರ್ವಜನಿಕ ಮತ್ತು ಕಾರ್ಯಕರ್ತರ ವಲಯದಲ್ಲೂ ಇರುವಂತಹ ಮಾತು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಬಿಜೆಪಿ ಮಾತ್ರ ಕಾಂಗ್ರೆಸ್ ಗೆ ಡ್ಯಾಮೇಜ್ ಮಾಡುವ ಯಾವುದೇ ಕಾರ್ಯ ಮಾಡಿಲ್ಲ ಎಂದು ರೆಬೆಲ್ ತಂಡ ಆರೋಪಿಸಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ಹಾದಿ ಹಿಡಿದಿದ್ದವು. ಅಲ್ಲದೇ, ಕೆಲವು ಹೋರಾಟದ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕರು, ರಾಜ್ಯಾಧ್ಯಕ್ಷರ ವಿರುದ್ಧ ನೇರವಾದ ಆರೋಪ ಮಾಡಿದ್ದರು. ವಿಜಯೇಂದ್ರ ವಿರುದ್ಧ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಅಲ್ಲದೇ, ಹಿರಿಯ ನಾಯಕರು ವಿಜಯೇಂದ್ರ ಹಾಗೂ ಡಿಕೆಶಿ ಸ್ನೇಹದ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವುದನ್ನು ಕೂಡ ರೆಬೆಲ್ ಮುಂದಿಟ್ಟುಕೊಂಡು ದೆಹಲಿ ಅಂಗಳದಲ್ಲಿ ಪ್ರಸ್ತಾಪಿಸಲು ಮುಂದಾಗಿದೆ.
ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂತಹ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಬಿಜೆಪಿಯಲ್ಲೂ ಈಗ ಯಾವುದು ಸರಿಯಿಲ್ಲ. ಬಿಜೆಪಿಯ ಈ ಆಂತರಿಕ ಕಚ್ಚಾಟ, ಕಾಂಗ್ರೆಸ್ ಗೆ ಲಾಭವೇ ಸರಿ. ಏಕೆಂದರೆ ಅದರ ಬಹಿರಂಗ ಕುರ್ಚಿಯ ಫೈಟ್ ನ್ನು ಜನರ ಮನಸ್ಸಲ್ಲಿ ಛೀ ಎಂಬ ಭಾವ ಮೂಡುವಂತೆ ಮಾಡಲಿಲ್ಲ ಎಂದು ರೆಬೆಲ್ ಆರೋಪಿಸುತ್ತಿದೆ. ಈ ಎಲ್ಲ ಆರೋಪಗಳು ಈಗ ವಿಜಯೇಂದ್ರಗೆ ತೊಂದರೆ ತರುವಂತಿದ್ದು, ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ? ಅಥವಾ ವಿಜಯೇಂದ್ರ ಇದಕ್ಕೆ ಯಾವ ತಂತ್ರ ರೂಪಿಸುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

