ನವದೆಹಲಿ: ಮಾರುಕಟ್ಟೆಗಳಲ್ಲಿ 10 ರೂ. 20 ರೂ. ಮೌಲ್ಯದ ನಾಣ್ಯಗಳನ್ನು ನೀಡಿದರೆ ಹಲವರು ಇಂದಿಗೂ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ 50 ಪೈಸೆಯ ನಾಣ್ಯ ಸಂಪೂರ್ಣವಾಗಿ ನಿಷೇಧವಾಗಿದೆ ಎಂದೇ ಎಲ್ಲರೂ ನಂಬಿದ್ದಾರೆ. ಈ ಗೊಂದಲಗಳ ಹಿನ್ನೆಲೆಯಲ್ಲಿ ಆರ್ ಬಿಐ ಸ್ಪಷ್ಟನೆಯೊಂದನ್ನು ನೀಡಿದೆ.
50 ಪೈಸೆಯಿಂದ ಹಿಡಿದು 20 ರೂ.ವರೆಗಿನ ನಾಣ್ಯಗಳು ಕಾನೂನು ಬದ್ಧವಾಗಿ ಚಲಾವಣೆಯಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಹೀಗಾಗಿ ನಾಣ್ಯಗಳ ವಿಷಯದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. “ಆರ್‌ಬಿಐ ಕೆಹ್ತಾ ಹೈ” ಎಂಬ ಬ್ಯಾನರ್ ಅಡಿಯಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದೆ. ಅಲ್ಲದೇ, ಜನರಿಗೆ ಸಂದೇಶಗಳನ್ನು ಕಳುಹಿಸುವುದರ ಮೂಲಕವು ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ನಾಣ್ಯಗಳ ಚಲಾವಣೆಯ ವಿಷಯದ ಕುರಿತು ಎರಡು ವಿಡಿಯೋಗಳನ್ನು ಆರ್ ಬಿಐ ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿರುವ ವಿಡಿಯೋಗಳಲ್ಲಿ ಅಂಗಡಿ ಮಾಲೀಕರು ನಾಣ್ಯ ಸ್ವೀಕರಿಸದೇ ಇರುವುದನ್ನು ತೋರಿಸಲಾಗಿದೆ. ಅದೇ ರೀತಿ ವಿಡಿಯೋ ಕೊನೆಯಲ್ಲಿ ಓರ್ವ ಅಂಗಡಿ ಮಾಲೀಕ ನಾಣ್ಯ ಸ್ವೀಕರಿಸುವುದನ್ನು ತೋರಿಸುವ ಮೂಲಕ ನಾಣ್ಯಗಳು ಇನ್ನೂ ಮಾನ್ಯವಾಗಿವೆ ಮತ್ತು ಚಾಲ್ತಿಯಲ್ಲಿವೆ. ನಾಣ್ಯಗಳ ಬಗೆಗಿನ ವದಂತಿ ನಂಬಬೇಡಿ. ಒಂದೇ ಮೌಲ್ಯದ ವಿಭಿನ್ನ ನಾಣ್ಯ ವಿನ್ಯಾಸಗಳು ದೀರ್ಘಕಾಲದವರೆಗೆ ಚಲಾವಣೆಯಲ್ಲಿರುತ್ತವೆ. ಅವೆಲ್ಲವೂ ಸ್ವೀಕಾರಾರ್ಹ ಎಂದು ಆರ್‌ಬಿಐ ವಿಡಿಯೋದಲ್ಲಿ ಹೇಳಿದೆ.
50 ಪೈಸೆ ಹಾಗೂ 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ನಾಣ್ಯಗಳ ಬದಲಿಗೆ ನೋಟನ್ನು ಕೇಳುತ್ತಿದ್ದಾರೆ ಎಂಬ ಸಾಕಷ್ಟು ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಇವುಗಳನ್ನು ರದ್ದುಪಡಿಸಿಲ್ಲ ಮತ್ತು ನಾಗರಿಕರು ಅದನ್ನು ಮುಕ್ತವಾಗಿ ಬಳಸುವುದನ್ನು ಮುಂದುವರಿಸಬಹುದು ಎಂದು ತಿಳಿಸಿದೆ. (ಏಜೆನ್ಸೀಸ್)

