BosstvKannada

ರಾಜಕೀಯ ಭೀಷ್ಮ ಶಾಮನೂರು ಪಂಚಭೂತಗಳಲ್ಲಿ ಲೀನ

ಬೆಂಗಳೂರು, ಡಿ.15 : ವಯೋಸಹಜ ಖಾಯಿಲೆಯಿಂದ ಭಾನುವಾರ ನಿಧನರಾಗಿದ್ದ ಕಾಂಗ್ರೆಸ್‌ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯನ್ನು ದಾವಣಗೆರೆ ನಗರದ ಆನೆಕೊಂಡದ ಬಳಿ ಇರುವ ಶಾಮನೂರು ಮನೆತನದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಪಂಚಪೀಠ ಹಾಗೂ ವಿವಿಧ ಜಗದ್ಗುರುಗಳ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನಗಳಂತೆ ಕ್ರಿಯಾ ಸಮಾಧಿ ನಿರ್ಮಿಸಿ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ.

ನಗರದ ಎಂಸಿಸಿ ಬಡಾವಣೆಯ ಬಿ ಬ್ಲಾಕ್‌ನಿಂದ ಹೊರಟ ಮೆರವಣಿಗೆಯಲ್ಲಿ ಭಜನೆ ತಂಡಗಳು ಭಕ್ತಿ ಗೀತೆ ಹಾಡಿದವು. ಪಾರ್ಥಿವ ಶರೀರದ ಕೈವಲ್ಯಕ್ಕೆ ಪುತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಗಲು ಕೊಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತಿದ್ದ ಅಪಾರ ಅಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹೂಹಾರ ಹಾಕಿ ಗೌರವ ಸಲ್ಲಿಸಿ ತಮ್ಮ ನೆಚ್ಚಿನ ನಾಯಕನಿಗೆ ಕಂಬನಿ ಮಿಡಿದರು. ಶಾಮನೂರು ರಸ್ತೆ, ಗುಂಡಿ ವೃತ್ತ, ಚರ್ಚ್ ರಸ್ತೆ, ರಾಮ್ ಅಂಡ್ ಕೋ ವೃತ್ತ, ಎವಿಕೆ ಕಾಲೇಜು ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಹೈಸ್ಕೂಲ್ ಮೈದಾನ ತಲುಪಿತು.

ಹೈಸ್ಕೂಲ್ ಮೈದಾನದಲ್ಲಿ ಇಂದು(ಸೋಮವಾರ) ಸಂಜೆ 4 ಗಂಟೆವರೆಗೂ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ವಿವಿಧ ಗಣ್ಯರು, ಸಾ‌ರ್ವಜನಿಕರು ಹಾಗೂ ಅಭಿಮಾನಿಗಳು ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಬಳಿಕ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.

ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ :
ಶಾಸಕ ಶಾಮನೂರು ಅವರ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ, ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಂದನೆ ಸಲ್ಲಿಸಲಾಯಿತು.

ಅಂತಿಮ ದರ್ಶನದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್‌, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಶಾಸಕ ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.

Exit mobile version