Site icon BosstvKannada

ದಯವಿಟ್ಟು ಸರ್ಕಾರದ ಜೊತೆ ಸಹಕರಿಸಿ, ಹಠ ಮಾಡಬೇಡಿ.. ಕರ್ತವ್ಯಕ್ಕೆ ಹಾಜರಾಗಿ : ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ

ಸಾರಿಗೆ ನೌಕರರಿಗೆ ಸಹಾಯ ಮಾಡುವ ಅವಕಾಶ ಸಿಕ್ಕರೆ ಖಂಡಿತವಾಗಿ ಮುಖ್ಯಮಂತ್ರಿಗಳು ಅದನ್ನು ಮಾಡುತ್ತಾರೆ. ಇಲ್ಲಿ ಹಠ ಮಾಡುವುದರಿಂದ ಪ್ರಯೋಜನವಿಲ್ಲ. ಸಾರ್ವಜನಿಕರ ಬದುಕು ಗಮನದಲ್ಲಿಟ್ಟುಕೊಂಡು ಸಹಕರಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾರಿಗೆ ನೌಕರರಿಗೆ ಮನವಿ ಮಾಡಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಸಾರಿಗೆ ನೌಕರರ ಬೇಡಿಕೆ ತಪ್ಪು ಎಂದು ಸರ್ಕಾರ ಹೇಳುತ್ತಿಲ್ಲ. ಅವರು ಕೂಡ ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಅವರಿಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ. ನಾಗರೀಕರನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಧ್ಯವಾಗದನ್ನು ಮಾಡಿ ಎಂದು ಒತ್ತಡ ಹಾಕಬಾರದು, ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ. ಇಂದು ಕರ್ತವ್ಯಕ್ಕೆ ಹಾಜರಾಗಿರುವ ಚಾಲಕರು ಹಾಗೂ ಕಂಡಕ್ಟರ್ ಗಳಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ನಾಗರೀಕರಿಗೆ ಪ್ರಾಮುಖ್ಯತೆ ಕೊಡಿ. ಸಾರ್ವಜನಿಕರ ಬದುಕು ಮುಖ್ಯ.  ಮಾಡುವಂತಹದ್ದು ಇದ್ದರೆ ಖಂಡಿತವಾಗಿ ಸಿಎಂ ಈಡೇರಿಸುತ್ತಾರೆ. ನೀವು ಕೂಡ ಸಮಾಜಸೇವೆ ಮಾಡಬೇಕು ಅಂತ ಬಂದಿರುವವರು ದಯಮಾಡಿ ಸಹಕಾರ ಕೊಡಬೇಕು ಅಂತಾ ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರಾ ಎಂದು ಕೇಳಿದಾಗ, “ಆಗಸ್ಟ್ 10ರಂದು ಆಗಮಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ನಾನು ಉದ್ಘಾಟನೆಯಾಗಲಿರುವ ಮೆಟ್ರೋ ಮಾರ್ಗವನ್ನು ಪೂರ್ವಭಾವಿಯಾಗಿ ಪರಿಶೀಲನೆ ಮಾಡಿದ್ದೇನೆ. ಅಧಿಕೃತ ಕಾರ್ಯಕ್ರಮ ಪಟ್ಟಿ ಇನ್ನು ಬಂದಿಲ್ಲ. ಆದರೆ ರೈಲ್ವೇ ಯೋಜನೆ ಉದ್ಘಾಟನೆ, ಅವರ ಪಕ್ಷದ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳಿವೆ” ಎಂದು ತಿಳಿಸಿದರು.

Exit mobile version