Site icon BosstvKannada

ಭಾರತೀಯರ ದೇಶ ಭಕ್ತಿಗೆ ಪಾಕ್‌ ಕ್ರಿಕೆಟಿಗರ ಸವಾಲು.. ನಾಲಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗರು!

ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಆಡದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧದ ಪಂದ್ಯದಿಂದ ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ಹಿಂದೆ ಸರಿದಿದ್ದರು. ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹೀಗೆ ಪಂದ್ಯವನ್ನು ರದ್ದುಗೊಳಿಸಲು ಮುಖ್ಯ ಕಾರಣ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿರುವುದು. ಪಾಕಿಸ್ತಾನ್ ಬೆಂಬಲಿತ ಭಯೋತ್ಪಾದಕರು ಭಾರತದ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಇಂಡಿಯಾ ಚಾಂಪಿಯನ್ಸ್ ತಂಡದ ಕೆಲ ಆಟಗಾರರು ಪಾಕ್ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದ್ದರು. ಹೀಗಾಗಿ ಮ್ಯಾಚ್ ಅನ್ನು ಕ್ಯಾನ್ಸಲ್ ಮಾಡಲಾಯಿತು. ಇದೀಗ ಇಂಡಿಯಾ ಚಾಂಪಿಯನ್ಸ್ ಆಟಗಾರರ ನಡೆಯನ್ನು ಪಾಕ್ ತಂಡದ ಮಾಜಿ ಆಟಗಾರರು ಟೀಕಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪಾಕ್‌ ಕ್ರಿಕೆಟಿಗ ಸಲ್ಮಾನ್ ಬಟ್, ಭಾರತೀಯ ಕ್ರಿಕೆಟಿಗರು ನಿಜವಾಗಿಯೂ ದೇಶಭಕ್ತರಾಗಿದ್ದರೆ ಯಾವುದೇ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದಿಲ್ಲ. ಕ್ರಿಕೆಟ್ ಮಾತ್ರವಲ್ಲ.. ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ರೀಡೆಯಲ್ಲಿ ಪಾಕಿಸ್ತಾನದೊಂದಿಗೆ ಸ್ಪರ್ಧಿಸುವುದಿಲ್ಲ ಎಂದು ಶಪಥ ಮಾಡಿ. ಅದು ಒಲಿಂಪಿಕ್ಸ್‌ನಲ್ಲಿಯೂ ಸಹ. ನೀವು ಹಾಗೆ ಮಾಡಲು ತಯಾರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಅದೇ ಶಾಹಿದ್‌ ಅಫ್ರಿದಿ ಕೂಡ ಭಾರತ ಆಡುವುದಿಲ್ಲ ಅಂದ್ರೆ ಮುಂಚಿತವಾಗಿ ಹೇಳಬೇಕಿತ್ತು ಎಂದು ಕುಟುಕಿದ್ದಾರೆ.

ಭಾರತ ತಂಡವು ಇನ್ಮುಂದೆ ಪಾಕಿಸ್ತಾನ ವಿರುದ್ಧ ವಿಶ್ವಕಪ್​ನಲ್ಲಿ ಆಡುವುದಿಲ್ಲ. ಒಲಿಂಪಿಕ್ಸ್​ನಲ್ಲೂ ಮುಖಾಮುಖಿಯಾಗಲ್ಲ ಎಂದು ಭರವಸೆ ನೀಡಿ. ಇದರ ಹೊರತಾಗಿ ಪ್ರತಿ ಬಾರಿ ಕ್ರಿಕೆಟ್ ಮ್ಯಾಚ್ ಬಂದಾಗ ಮಾತ್ರ ಈ ವಿಷಯ ಚರ್ಚೆಯಾಗುವುದಲ್ಲ. ಇತರ ಕ್ರೀಡೆಗಳಲ್ಲಿ ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ. ಯಾವಾಗಲೂ ಕ್ರಿಕೆಟ್ ಮ್ಯಾಚ್ ಬಂದಾಗ ಮಾತ್ರ ಆಡಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ನೀವು ಪಾಕಿಸ್ತಾನ ವಿರುದ್ಧ ಯಾವುದೇ ಕ್ರೀಡೆಯಲ್ಲೂ ಸ್ಪರ್ಧಿಸಲ್ಲ ಎಂಬುದನ್ನು ಖಚಿತಪಡಿಸಿ ಆ ಬಳಿಕ ನಿಮ್ಮ ದೇಶಭಕ್ತಿ ಹೇಗಿದೆ ಎಂದು ನೋಡುತ್ತೇನೆ ಎಂದು ಸಲ್ಮಾನ್ ಬಟ್ ಸವಾಲು ಹಾಕಿದ್ದಾರೆ. ಇದಕ್ಕೆ ಭಾರತದ ಶಿಖರ್‌ ಧವನ್‌ ಮತ್ತು ಹರ್ಭಜನ್‌ ಸಿಂಗ್‌ ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯ ಇಂಡಿಯಾ-ಪಾಕಿಸ್ತಾನ್ ನಡುವಣ ಪಂದ್ಯ ರದ್ದತಿಯು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಈ ಚರ್ಚೆಯು ಮುಂದಿನ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ವೇಳೆಯೂ ಪ್ರತಿಧ್ವನಿಸುವುದು ಖಚಿತ. ಅದರಲ್ಲೂ ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬುದೇ ಸದ್ಯದ ಪ್ರಶ್ನೆ.

Exit mobile version