ಬೆಂಗಳೂರು : ಭಾರತೀಯ ರೈಲ್ವೆ ಇಲಾಖೆ ತನ್ನ ಟಿಕೆಟ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ತತ್ಕಾಲ್ ಟಿಕೆಟ್‌ಗಳನ್ನು ಪಡೆಯುವುದು ಇನ್ನು ಮುಂದೆ ಮೊದಲಿನಂತೆ ಸುಲಭವಲ್ಲ, ಏಕೆಂದರೆ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದು, ಅದು ಒಟಿಪಿ ಕಡ್ಡಾಯಗೊಳಿಸಲಾಗಿದೆ.
ಭಾರತೀಯ ರೈಲ್ವೆ ತನ್ನ ಟಿಕೆಟ್ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ, ಪಾರದರ್ಶಕ ಮತ್ತು ದಲ್ಲಾಳಿ ರಹಿತಗೊಳಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರೈಲ್ವೆ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಿಸಲು ಮೊಬೈಲ್ OTP ಕಡ್ಡಾಯವಾಗಲಿದೆ. OTP ಇಲ್ಲದೆ ಟಿಕೆಟ್ ಸಿಗುವುದಿಲ್ಲ.

ಏಕೆ ಬಂತು ಈ ನಿಯಮ? :
ತತ್ಕಾಲ್ ಟಿಕೆಟ್‌ಗಳು ಮಧ್ಯವರ್ತಿಗಳ ಕೈಗೆ ಬಿದ್ದು 3-4 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದವು. ನಕಲಿ ಐಡಿ, ತಪ್ಪು ಮೊಬೈಲ್ ಸಂಖ್ಯೆಗಳು, ಒಬ್ಬರೇ ಹಲವು ಟಿಕೆಟ್‌ಗಳನ್ನು ಬುಕ್ ಮಾಡಿಸಿ ಕಪ್ಪು ಮಾರುಕಟ್ಟೆಗೆ ತಳ್ಳುವುದು ಸ್ವಾಭಾವಿಕವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ರೈಲ್ವೆ ಈಗ OTP ಆಧಾರಿತ ವ್ಯವಸ್ಥೆಯನ್ನು ಕೌಂಟರ್ ತತ್ಕಾಲ್‌ಗೂ ವಿಸ್ತರಿಸಿದೆ.
ಈಗಾಗಲೇ ಆನ್‌ಲೈನ್‌ನಲ್ಲಿ ಇದು ಯಶಸ್ವಿಯಾಗಿದೆ. ಜುಲೈ 2025ರಿಂದ ಆನ್‌ಲೈನ್ ತತ್ಕಾಲ್ ಟಿಕೆಟ್‌ಗೆ ಆಧಾರ್ ಲಿಂಕ್ + OTP ಕಡ್ಡಾಯಗೊಳಿಸಲಾಗಿತ್ತು. ಅಕ್ಟೋಬರ್ 2025ರಿಂದ ಎಲ್ಲಾ ಸಾಮಾನ್ಯ ರಿಸರ್ವೇಷನ್ ಟಿಕೆಟ್‌ಗಳಿಗೂ ಆನ್‌ಲೈನ್ OTP ಕಡ್ಡಾಯವಾಗಿದೆ.