ಯೆಮೆನ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಬಗ್ಗೆ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಈ ಮಾಹಿತಿ ನೀಡಿದೆ. ಗ್ರ್ಯಾಂಡ್ ಮುಫ್ತಿ ಕಚೇರಿ ಮಾಹಿತಿ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶಿಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ರೆ ಯೆಮನ್ ಸರ್ಕಾರದಿಂದ ಅಧಿಕೃತ ಲಿಖಿತ ಪ್ರಕಟಣೆ ಬಂದಿಲ್ಲ ಎಂದೂ ಸಹ ಸ್ಪಷ್ಟಪಡಿಸಲಾಗಿದೆ.
ನಿಮಿಷಾ ಪ್ರಿಯಾ ಯಾರು?ಏನಿದು ಪ್ರಕರಣ?
ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್. ಯೆಮನ್ ನಾಗರಿಕ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ, 2017 ರಲ್ಲಿ ಕೊಲೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅದಕ್ಕೂ ಮುನ್ನ ಅವರು ಹಲವಾರು ವರ್ಷಗಳ ಕಾಲ ಆ ದೇಶದಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು. ತಲಾಲ್ ಬೆಂಬಲದೊಂದಿಗೆ, ನಿಮಿಷಾ 2015ರ ಏಪ್ರಿಲ್‌ನಲ್ಲಿ ವಿದೇಶದಲ್ಲಿ ತನ್ನ ಕನಸಿನ ಚಿಕಿತ್ಸಾಲಯವನ್ನು ತೆರೆದರು. ಅಲ್ಲಿ ಅವರು ಮಾನಸಿಕ, ದೈಹಿಕ ಮತ್ತು ಆರ್ಥಿಕ ಕಿರುಕುಳವನ್ನು ಅನುಭವಿಸಿದ್ದಾರೆಂದು ಆರೋಪಿಸಲಾಗಿದೆ. ತಲಾಲ್ ಕ್ಲಿನಿಕ್‌ನಲ್ಲಿ ಶೇ.33 ರಷ್ಟು ಪಾಲನ್ನು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದ್ದ. ಆಕೆಯ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದ. ಕಾನೂನುಬದ್ಧವಾಗಿ ಮದುವೆಯಾಗಿದ್ದಾವೆಂದು ಸೂಚಿಸಲು ವಿವಾಹ ಪ್ರಮಾಣಪತ್ರವನ್ನು ಸಹ ನಕಲಿ ಮಾಡಿದ್ದ. ಮಹ್ದಿ ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿಮಿಷಾ ಆರೋಪಿಸಿದ್ದರು.
2017ರ ಜುಲೈನಲ್ಲಿ ನಿಮಿಷಾ ಜೈಲಿಗೆ ಭೇಟಿ ನೀಡಿದಾಗ, ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮಹ್ದಿಗೆ ನಿದ್ರಾಜನಕ ಇನ್‌ಜೆಕ್ಷನ್ ಚುಚ್ಚಿದರು. ಪ್ರಮಾಣ ಅತಿಯಾದ್ದರಿಂದ ವ್ಯಕ್ತಿ ಮೃತಪಟ್ಟಿದ್ದ. ಮತ್ತೊಬ್ಬ ನರ್ಸ್ ಸಹಾಯ ಪಡೆದು ಮೃತದೇಹ ವಿಲೇವಾರಿಗೆ ಮುಂದಾಗಿದ್ದರು. ದೇಹವನ್ನು ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಭಾಗಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದ. ಇಬ್ಬರೂ ತಲೆಮರೆಸಿಕೊಂಡಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸಿದರು.

