ಏರೋಸ್ಪೇಸ್ ಯೋಜನೆಗಾಗಿಯೇ ಸರ್ಕಾರ ದೇವನಹಳ್ಳಿಯ ಜಮೀನು ಭೂಸ್ವಾಧೀನಕ್ಕೆ ಮುಂದಾಗಿತ್ತು. ಆದ್ರೆ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು.. ಇದರ ಬೆನ್ನಲ್ಲೇ, ಏರೋಸ್ಪೇಸ್ ಸಂಸ್ಥೆಗಳಿಗೆ ಆಂಧ್ರ ಸಿಎಂ ಪುತ್ರ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಬಹಿರಂಗ ಆಫರ್ ನೀಡಿದ್ರು. ಟ್ವೀಟ್ ಮೂಲಕ ಆಹ್ವಾನ ಕೊಟ್ಟ ನಾರಾ ಲೋಕೇಶ್ ವಿರುದ್ಧ ರಾಜ್ಯ ಸಚಿವರು ಕಿಡಿಕಾರಿದ್ದಾರೆ.
ಏರೋಸ್ಪೇಸ್ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಿಬಿಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ರಾಜ್ಯವು ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ.65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರ ಕೂಡ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ನಾನೂ ನೋಡಿದ್ದೇನೆ. ನಾನೂ ಅಲ್ಲೇ ಉತ್ತರ ಕೊಟ್ಟಿದ್ದೇನೆ. ಫಿಶಿಂಗ್ ಇನ್ ಟ್ರಬಲ್ ವಾಟರ್ ಅಂತಾರೆ.. ನಮ್ಮಲ್ಲಿ ಟ್ರಬಲ್ ವಾಟರ್ ಇಲ್ಲ, ವಾಟರ್ ಕಾಮ್ ಆಗಿದೆ. ಎಂ.ಬಿ ಪಾಟೀಲನಿಗೂ ಸಾಮರ್ಥ್ಯವಿದೆ, ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ನಾರಾ ಲೋಕೇಶ್ ಅವರ ಆಹ್ವಾನಕ್ಕೆ ರಾಜ್ಯ ಬಿಟ್ಟು ಯಾರೂ ಹೋಗುವುದಿಲ್ಲ. ಏರೋಸ್ಪೇಸ್ ಉದ್ಯಮಿಗಳಿಗೆ ಭೂಮಿಯಷ್ಟೇ ಅಲ್ಲ, ನೀರೂ ಕೂಡ ಬೇಕಾದಷ್ಟು ಸೌಲಭ್ಯ ನೀಡಿದ್ದೇವೆ. ಕಾವೇರಿ ನೀರನ್ನೂ ಕೂಡ ಕೊಡ್ತಿದ್ದೇವೆ. ಒಂದು ಇಂಡಸ್ಟ್ರಿ ಗೆ ಅವರು ಕೇಳಿದಲ್ಲಿ ಭೂಮಿ ಕೊಡ್ತೇವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳಲು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಈಗ ಉದ್ಯಮಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಸರಕಾರವೇನಾದರೂ ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರೆ, ಆಗ ಅವರು ರೈತರ ಪರವಾಗಿ ಮಾತನಾಡುತ್ತಿದ್ದರು. ವಿರೋಧ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ, ನನಗೆ ರಾಜ್ಯದ ಹಿತಾಸಕ್ತಿ ಮಾತ್ರ ಮುಖ್ಯ ಎಂದು ಎಂ.ಬಿ ಪಾಟೀಲ್ ಪ್ರತಿಪಾದಿಸಿದರು.
ಕೈಗಾರಿಕಾ ಇಲಾಖೆಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ದೇವನಹಳ್ಳಿ ವಿದ್ಯಮಾನವನ್ನೆಲ್ಲ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ. ಇಲಾಖೆಯ ಪ್ರಗತಿ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ನಾರಾ ಲೋಕೇಶ್ ಟ್ವೀಟ್ನಲ್ಲಿ ಏನಿತ್ತು?
ಕರ್ನಾಟಕದ ಈ ನಡೆಯ ಬಗ್ಗೆ ಕೇಳಿ ಬೇಸರವಾಯ್ತು ಎಂದು ಆಂಧ್ರ ಸಚಿವ ನಾರಾ ಲೋಕೇಶ್ ಟ್ವೀಟ್ ಮಾಡಿದ್ರು. “ನೀವು ಆಂಧ್ರಪ್ರದೇಶವನ್ನು ಏಕೆ ನೋಡಬಾರದು? ನಾವು ನಿಮಗಾಗಿ ಆಕರ್ಷಕ ಏರೋಸ್ಪೇಸ್ ನೀತಿಯನ್ನು ಹೊಂದಿದ್ದೇವೆ, ಅತ್ಯುತ್ತಮ ಪ್ರೋತ್ಸಾಹಕಗಳು ಮತ್ತು 8,000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ (ಬೆಂಗಳೂರಿನ ಹೊರಗೆ) ಇದೆ! ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು ಆಶಿಸುತ್ತೇವೆ,” ಎಂದು ನಾರಾ ಆಫರ್ ಕೊಟ್ಟಿದ್ರು.

