ದೆಹಲಿಯಲ್ಲಿದ್ದೇ ಡಿಸಿಎಂ ಡಿಕೆಶಿಗೆ ಡಿಚ್ಚಿ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಹಾ ಹೋರಾಟಕ್ಕೆ ಸಜ್ಜಾಗಿದ್ದಾರೆ. ಐದು ವರ್ಷ ನಾನೇ ಸಿಎಂ ಅಂತಾ ಕಡ್ಡಿ ಮುರಿದಂತೆ ಹೇಳಿದ್ದ ಸಿದ್ದು, ಇದೀಗ ಮತ್ತೊಂದು ಪಾಶುಪತಾಸ್ತ್ರ ಸಿಡಿಸಲು ರೆಡಿಯಾಗಿದ್ದಾರೆ. ಅದೂ ತವರು ಜಿಲ್ಲೆಯಲ್ಲೇ ಅಪಾರ ಪ್ರಮಾಣದಲ್ಲಿ ಬೆಂಬಲಿಗರನ್ನು ಸೇರಿಸಿ ಅಧಿಕಾರ ಹಂಚಿಕೆ ಒಪ್ಪಂದದ ಬಾಣ ಬಿಡೋರಿಗೆ ಸಿದ್ದು ತಿರುಗು ಬಾಣ ಬಿಡೋಕೆ ತುದಿಗಾಲಲ್ಲಿ ನಿಂತಿದ್ದಾರೆ..
ಸಿಎಂ ಸಿದ್ದರಾಮಯ್ಯ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.. ಮೈಸೂರಿನಲ್ಲಿ ಜುಲೈ 19ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸುವ ಲೆಕ್ಕಾಚಾರ ಸಿದ್ದು ಬಣಕ್ಕಿದೆ.. ಜುಲೈ 19ರಂದು ಕಾರ್ಯಕ್ರಮ ಇದ್ದರೂ 3 ದಿನ ಮೊದಲೇ ಅಂದರೆ ಜುಲೈ 17ರಂದೇ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಅಲ್ಲೇ ಠಿಕಾಣಿ ಹೂಡಲಿದ್ದಾರೆ. ಸಾಧನ ಸಮಾವೇಶದ ನೆಪದಲ್ಲಿ ತಮ್ಮ ಪರ ಇರುವ ಬೆಂಬಲವನ್ನು ಹೈಕಮಾಂಡ್ ಹಾಗೂ ವಿರೋಧಿ ಪಾಳಯದವರಿಗೆ ತಲುಪಿಸುವುದು ಸಿದ್ದರಾಮಯ್ಯ ಗುರಿ ಅಂತಾ ಹೇಳಲಾಗ್ತಿದೆ..

ಇನ್ನು, ಮೈಸೂರಿನ ಸಾಧನಾ ಸಮಾವೇಶದಲ್ಲಿ 2,600 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಹಳೇ ಮೈಸೂರು ಭಾಗದ ಈ ಸಮಾವೇಶದ ಮೂಲಕ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶ ರವಾನಿಸಲಿದ್ದಾರೆ. ಈ ಸಮಾವೇಶದ ಜವಾಬ್ದಾರಿಯನ್ನ ಸಿಎಂ ಸಿದ್ದರಾಮಯ್ಯ ಆಪ್ತರೂ ಆಗಿರುವ ಸಚಿವ ಡಾ.ಮಹದೇವಪ್ಪ ಹೆಗಲಿಗೆ ವಹಿಸಲಾಗಿದೆ.
ಈಗಾಗಲೇ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದ್ದು, ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಪ್ಲ್ಯಾನ್ ರೂಪಿಸಲಾಗಿದೆ. ಅಲ್ಲದೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಕ್ಷೇತ್ರದಿಂದ 6ರಿಂದ 8 ಸಾವಿರ ಜನರನ್ನ ಕರೆತರುವಂತೆ ಶಾಸಕರಿಗೆ ಸಿದ್ದರಾಮಯ್ಯ ಟಾಸ್ಕ್ ನೀಡಿದ್ದಾರೆ..
ಒಟ್ನಲ್ಲಿ, ಸಿಎಂ ಬದಲಾವಣೆ ಬೆಂಕಿ ಹಚ್ಚಿದವರಿಗೆ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ತಣ್ಣೀರೆರಚಲು ಬ್ರಹ್ಮಾಸ್ತ್ರ ರೆಡಿ ಮಾಡ್ತಿದ್ದಾರೆ.. ಬೆಂಬಲಿಗರ, ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ ಹೈಕಮಾಂಡ್‌ಗೆ ಸಿದ್ದು ತಮ್ಮ ಶಕ್ತಿ ತೋರಿಸಲು ಪ್ಲ್ಯಾನ್ ಮಾಡಿದ್ದಾರೆ.. ಆದ್ರೆ, ಈ ಪ್ಲ್ಯಾನ್ ಹೇಗೆ ವರ್ಕೌಟ್ ಆಗುತ್ತೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ..
