Site icon BosstvKannada

‘ತಪ್ಪು ನನ್ನದೇ..’ ಕ್ಷಮೆ ಕೇಳಿದ ಮಾಜಿ ನ್ಯಾ. ಸಂತೋಷ್‌ ಹೆಗ್ಡೆ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನ್ಯಾಯಾಧೀಶ ಸಂತೋಷ್‌ ಹೆಗ್ಡೆ ಅವರು ಖಾಸಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತ ಪುನೀತ್​​ ಕೆರೆಹಳ್ಳಿಗೆ ಸನ್ಮಾನ ಮಾಡಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಅವರು, ಪುನೀತ್ ಕೆರೆಹಳ್ಳಿಗೆ ಶಾಲು ಪೇಟ ಹೊದಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಇದರ ಫೋಟೋಗಳನ್ನು ಪುನೀತ್ ಕೆರೆಹಳ್ಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ನೆಟ್ಟಿಗರು ಸಂತೋಷ್ ಹೆಗ್ಡೆ ಅವರನ್ನು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಸನ್ಮಾನ ಮಾಡಿದ್ದೀರಿ. ಆತನ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸಂತೋಷ್​ ಹೆಗ್ಡೆ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿದು ನಾನು ಹೋಗಿದ್ದೆ, ಅಲ್ಲಿ ಯಾರಿಗೆ ಪ್ರಶಸ್ತಿ ಕೊಡುತ್ತಿದ್ದೇನೆ ಎಂದು ನನಗೆ ಗೊತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ಮತ್ತೊಬ್ಬ ಮುಖ್ಯ ನ್ಯಾಯಾಮೂರ್ತಿಯೂ ಇದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತಾ ಹೇಳಿ ಕ್ಷಮೆಯಾಚಿಸಿದ್ದಾರೆ.

Exit mobile version