ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಸದನ ಕದನಕ್ಕೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿವೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ, ರಸಗೊಬ್ಬರ ಅಭಾವ, ಅನುದಾನ ತಾರತಮ್ಯ, ಒಳಮೀಸಲಾತಿ ವಿಳಂಬ, ಸುರ್ಜೇವಾಲಾ ಸಭೆಗಳ ವಿಷಯ, ಕಾನೂನು ಸುವ್ಯವಸ್ಥೆ ವೈಫಲ್ಯ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ತಯಾರಾಗಿವೆ. ಇಂದಿನಿಂದ ಆ.22ರವರೆಗೆ ಒಟ್ಟು 10 ದಿನ ಕಾಲ ಸದನದಲ್ಲಿ ಕಲಾಪ ನಡೆಯಲಿದೆ.
ಇನ್ನು ಈಗಾಗಲೇ ವಿಧಾನಸಭೆಯಲ್ಲಿ ಕಲಾಪ ಆರಂಭವಾಗಿದ್ದು, ಸಾಹಿತಿಗಳಾದ ಎಚ್. ಎಸ್.ವೆಂಕಟೇಶಮೂರ್ತಿ, ಜಿ.ಎಸ್.ಸಿದ್ದಲಿಂಗಯ್ಯ, ಪೋಪ್ ಫ್ರಾನ್ಸಿಸ್, ಹಿರಿಯ ರಾಜಕಾರಣಿ ಡಾ.ಎನ್.ತಿಪ್ಪಣ್ಣ, ಕಸ್ತೂರಿ ರಂಗನ್ ಹಾಗೂ ಬಿ ಸರೋಜಾದೇವಿ ಸೇರಿ ಹಲವು ಮೃತ ಗಣ್ಯರಿಗೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಸಂತಾಪ ಸೂಚಿಸಲಾಯಿತು. ಅಲ್ಲದೇ ಕಲಾಪದಲ್ಲಿ ಆರ್‌ಸಿಬಿ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಹಾಗೂ ಗುಜರಾತ್ ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರಿಗೂ ಮತ್ತು ಪಹಲ್ಗಾಮ್‌ನಲ್ಲಿ ಮೃತಪಟ್ಟ ಕನ್ನಡಿಗರು ಸೇರಿದಂತೆ ಮೃತ ಪಟ್ಟ ಎಲ್ಲಾ ಪ್ರಯಾಣಿಕರಿಗೂ ಸಂತಾಪ ಸೂಚಿಸಿ ಸಭೆಯನ್ನ ಆರಂಭಿಸಲಾಯಿತು..

