Site icon BosstvKannada

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆಯಲು ಮುಂದಾದ ಮೊನಾಲಿಸಾ!

ಬೆಂಗಳೂರು, ಫೆ.13: ಮಹಾ ಕುಂಭಮೇಳದಲ್ಲಿ ಮಣಿ ಹಾರಗಳನ್ನು ಮಾರಾಟ ಮಾಡುವ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿದ್ದ ಮೊನಾಲಿಸಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?. ತನ್ನ ಕಣ್ಣೋಟದಲ್ಲೇ ಜನರ ಮನ ಗೆದ್ದಿದ್ದ ಈ ಚೆಂದುಳ್ಳಿ ಚೆಲುವೆ ಇದ್ದಕ್ಕಿದ್ದಂತೆ ಪ್ರಸಿದ್ಧರಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. 2025ರ ಮಹಾ ಕುಂಭಮೇಳದಲ್ಲಿ ಈಕೆಯ ನೈಜ ಸೌಂದರ್ಯ ಮತ್ತು ಸರಳತೆ ಕಂಡ ಪ್ರವಾಸಿಗರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋಗಳು ಎಲ್ಲೇಡೆ ವೈರಲ್‌ ಆಗಿ “ಮಹಾಕುಂಭದ ಮೊನಾಲಿಸಾ” ಎಂದೇ ಈಕೆ ಪ್ರಖ್ಯಾತರಾದರು.

ಇತ್ತೀಚೆಗೆ, ಮೊನಾಲಿಸಾ ಕೈಯಲ್ಲಿ ಮೂರು ಚಿತ್ರಗಳಿವೆ. ಅವುಗಳಲ್ಲಿ, ‘ದಿ ಡೈರಿ ಆಫ್ ಮಣಿಪುರ’ ಮೊದಲು ಬಿಡುಗಡೆಯಾಗಲಿದೆ. ಅಂದರೆ ಇದು ಅವರ ಮೊದಲ ಚಿತ್ರ. ಪ್ರಸ್ತುತ, ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ ಮೊನಾಲಿಸಾ ತನಗೆ ಜನ ಮನ್ನಣೆ ತಂದು ಕೊಟ್ಟಿದ್ದ ಪ್ರಯಾಗರಾಜ್‌ಗೆ ಭೇಟಿ ನೀಡಿ ಗಂಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಕುಂಭಮೇಳದಲ್ಲಿ ಹೂಮಾಲೆಗಳನ್ನು ಮಾರಾಟ ಮಾಡುವ ದಿನ ನೆನೆದು ಅವರು ಭಾವುಕರಾಗಿದ್ದಾರೆ. ಇದೀಗ ಈ ಕುಂಭಮೇಳ ಸುಂದರಿಯ ಬಗ್ಗೆ ಒಂದು ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. ‘ತನಗೆ ಇಷ್ಟು ಸುಂದರವಾದ ಬದುಕು ಕಟ್ಟಿ ಕೊಟ್ಟ ಸಮಾಜಕ್ಕೆ ಮರಳಿ ನೀಡುವ ಆಲೋಚನೆಯನ್ನು ಮೊನಾಲಿಸಾ ಹೊಂದಿದ್ದಾರೆ.

ತಾನು ನಟಿಸಿರುವ “ಮೊದಲ ಚಲನಚಿತ್ರದಿಂದ ಬರುವ ಸಂಭಾವನೆಯಲ್ಲಿ ತನ್ನ ಹುಟ್ಟೂರಾದ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸುವುದು ತನ್ನ ಕನಸು” ಎಂದು ಮೊನಾಲಿಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ‘ಈ ಪ್ರದೇಶಗಳಲ್ಲಿ ಹುಡುಗಿಯರಿಗೆ ಸರಿಯಾದ ಶೈಕ್ಷಣಿಕ ಅವಕಾಶಗಳಿಲ್ಲ. ಇದರಿಂದ ಅವಿದ್ಯಾವಂತರಾಗಿ ಹುಡುಗಿಯರು ಜೀವನದಲ್ಲಿ ಹಿಂದುಳಿದಿದ್ದಾರೆ. ಸಮಾಜದಲ್ಲಿ ನಿಜವಾದ ಬದಲಾವಣೆ ಹೆಣ್ಣುಮಕ್ಕಳ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ನನ್ನ ಸಂಪಾದನೆಯನ್ನು ಭವಿಷ್ಯದ ಪೀಳಿಗೆಗೆ ಬಳಸಲು ಬಯಸುತ್ತೇನೆ ಹೊರತು ವೈಯಕ್ತಿಕ ಸೌಕರ್ಯಕ್ಕಾಗಿ ಅಲ್ಲ’ ಎಂದು ಮೊನಾಲಿಸಾ ಹೇಳಿದ್ದಾರೆ. ಈ ಹೇಳಿಕೆ ವೈರಲ್ ಆಗಿದ್ದು, ಇವರ ಈ ನಿರ್ಧಾರಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದೆ.

Exit mobile version