ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಸೋಮವಾರದಿಂದ ನಾಲ್ಕು ದಿನಗಳ ಕಾಲ ವಿದೇಶಿ ಪ್ರವಾಸ ಮಾಡಲಿರುವ ಪ್ರಧಾನಿ ಮೋದಿ, ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು, ವಿಶೇಷವಾಗಿ ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಬಲಪಡಿಸುವುದು ಉದ್ಧೇಶವಾಗಿದೆ.
ಡಿ. 15 ಹಾಗೂ 16ರ ವರೆಗೆ ಜೋರ್ಡಾನ್‌ಗೆ ಭೇಟಿ ನೀಡಲಿದ್ದಾರೆ. ರಾಜ ಎರಡನೇ ಅಬ್ದುಲ್ಲಾ ಬಿನ್ ಅಲ್-ಹುಸೇನ್ ಅವರ ಆಹ್ವಾನದ ಮೇರೆಗೆ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಿಶೀಲನೆ ನಡೆಸಲಿದ್ದಾರೆ. ಪ್ರಾದೇಶಿಕ ಸಮಸ್ಯೆಗಳ ಕುರಿತು ಕೂಡ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಭಾರತ-ಜೋರ್ಡಾನ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಹೊಸ ಸಹಕಾರದ ಮಾರ್ಗಗಳನ್ನು ಅನ್ವೇಷಿಸಲು, ಮತ್ತು ಪ್ರಾದೇಶಿಕ ಶಾಂತಿ, ಭದ್ರತೆ ಹಾಗೂ ಸ್ಥಿರತೆಯನ್ನು ಉತ್ತೇಜಿಸುವ ನವದೆಹಲಿಯ ಬದ್ಧತೆಯನ್ನು ಪುನರುಚ್ಚರಿಸಲು ಈ ಭೇಟಿ ಒಂದು ಅವಕಾಶ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ.
ಡಿ. 16 ರಿಂದ 17 ರವರೆಗೆ ಎರಡು ದಿನಗಳ ಕಾಲ ಇಥಿಯೋಪಿಯಾಕ್ಕೆ ತೆರಳಲಿದ್ದಾರೆ. ಪೂರ್ವ ಆಫ್ರಿಕಾ ದೇಶಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಅಡಿಸ್ ಅಬಾಬಾದಲ್ಲಿ, ಮೋದಿ ಅವರು ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಸ್ನೇಹ ಮತ್ತು ದ್ವಿಪಕ್ಷೀಯ ಸಹಕಾರದ ನಿಕಟ ಸಂಬಂಧಗಳನ್ನು ಮುಂದುವರಿಸುವ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ” ಎಂದು MEA ತಿಳಿಸಿದೆ.
ಡಿ. 17 ರಿಂದ 18 ರವರೆಗೆ ಓಮನ್‌ಗೆ ಭೇಟಿ ನೀಡಲಿದ್ದಾರೆ. ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಹೋಗಲಿದ್ದಾರೆ. “ಭಾರತ ಮತ್ತು ಓಮನ್ ಶತಮಾನಗಳಷ್ಟು ಹಳೆಯ ಸ್ನೇಹ, ವ್ಯಾಪಾರ ಸಂಬಂಧಗಳು ಮತ್ತು ಬಲವಾದ ಜನ-ಜನಾಂಗದ ಸಂಬಂಧಗಳಿಂದ ಬೆಂಬಲಿತವಾದ ಸರ್ವವ್ಯಾಪಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ” ಎಂದು MEA ತಿಳಿಸಿದೆ.

