Site icon BosstvKannada

ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಹೈಕೋರ್ಟ್‌ ಮೆಟ್ಟಿಲೇರಿದ MLC ರವಿಕುಮಾರ್‌

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ಕುರಿತು ಬಿಜೆಪಿ ಎಮ್‌ಎಲ್‌ಸಿ ರವಿಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದನ್ನ ಪ್ರಶ್ನಿಸಿ ವಿಧಾನ ಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇಂದು ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ರವಿಕುಮಾರ್ ಪರ ವಕೀಲರು, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ಪೀಠಕ್ಕೆ ಮನವಿ ಮಾಡಿದರು. ವಕೀಲರ ಮನವಿ ಪರಿಗಣಿಸಿದ ನ್ಯಾಯಪೀಠ, ಇಂದು ಮಧ್ಯಾಹ್ನ ಅರ್ಜಿ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ತಿಳಿಸಿತು.

ದೂರಿನ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ರವಿಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್, ಅರ್ಜಿದಾರರು ವಿಚಾರಣೆಗೆ ಸಹಕರಿಸಿದಲ್ಲಿ ಬಲವಂತದ ಕ್ರಮ ಬೇಡ ಎಂದು ತಿಳಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ದೂರು ನೀಡಿರುವ ಮಹಿಳೆ ವಿದ್ಯುನ್ಮಾನ ಮಾಧ್ಯಮದಲ್ಲಿ ನೋಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲು ಮುಂದಾದ ಸಂದರ್ಭದಲ್ಲಿ ಅವರು ಸರಿಯಾಗಿ ಸ್ಪಂದಿಸಿಲ್ಲ. ಈ ಕಾರಣದಿಂದ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಇದಕ್ಕೆ ತೀವ್ರ ಆಕ್ಷೇಪಿಸಿದ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬೆಳ್ಳಿಯಪ್ಪ, ಅರ್ಜಿದಾರರು ಪದೇ ಪದೇ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಐಎಎಸ್ ಅಧಿಕಾರಿಗಳ ಘನತೆ ಕುಂದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ ತಡೆ ನೀಡಿದಲ್ಲಿ ವಿಚಾರಣೆಗೆ ಅಡ್ಡಿಯಾಗಲಿದೆ. ಅಲ್ಲದೆ, ಪ್ರಕರಣ ದಾಖಲಾದ 24 ತಾಸಿನಲ್ಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂತ್ರಸ್ತರಾಗಿದ್ದಾರೆ. ಆದ್ದರಿಂದ ತಡೆ ನೀಡಬಾರದು ಎಂದು ಕೋರಿದರು.

ವಾದ–ಪ್ರತಿವಾದ ಆಲಿಸಿದ ಪೀಠ ಪ್ರಕರಣದ ವಿಚಾರಣೆ ನಡೆಸಬಹುದು. ಆದರೆ, ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಏನಿದು ಪ್ರಕರಣ ?

ಬಿಜೆಪಿ ಪಕ್ಷದಿಂದ ಜುಲೈ 1 ರಂದು ವಿಧಾನಸೌಧ ಆವರಣದ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ರವಿಕುಮಾರ್ ಅವರು ಶಾಲಿನಿ ರಜನೀಶ್ ಅವರ ಕುರಿತು ಅಪಮಾನಕರ ಪದಗಳನ್ನು ಬಳಸಿ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಜೆ.ಪಿ.ನಗರದ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಗರ್ತನಾ ಅವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರಿನಲ್ಲಿ ರವಿಕುಮಾರ್ ಅವರ ಹೇಳಿಕೆ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅಗೌರವ ತಂದಿದೆ. ಮುಖ್ಯ ಕಾರ್ಯದರ್ಶಿಯಾದ ಶಾಲಿನಿ ರಜನೀಶ್ ಅವರ ಗೌರವಕ್ಕೆ ಕುಂದು ಉಂಟು ಮಾಡಿ, ಇಡೀ ಮಹಿಳಾ ಕುಲಕ್ಕೆ ಅಗೌರವ ತೋರಿದಂತೆ ಆಗಿದೆ. ಆರೋಪಿತರ ಮಾತು ಲೈಂಗಿಕ ಅರ್ಥ ಛಾಯೆ ಬರುವ ಮಾತಾಗಿದೆ. ಇದು ಮುಖ್ಯಕಾರ್ಯದರ್ಶಿಯವರ ಖ್ಯಾತಿಗೆ ಹಾನಿ ಉಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

Exit mobile version