ಸಿಎಂ ಸಿದ್ದರಾಮಯ್ಯರ ಪರಮಾಪ್ತರಾಗಿರುವ ಸಚಿವ ರಾಜಣ್ಣ ಹೇಳಿಕೆಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಇರಿಸು ಮುರಿಸು ಅನುಭವಿಸುವಂತಾಗಿದೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಅಂತಾ ಪದೇ ಪದೇ ಹೇಳಿಕೆ ನೀಡ್ತಿದ್ರು. ಆದ್ರೆ ಸೆಪ್ಟೆಂಬರ್ ಕ್ರಾಂತಿಗೂ ಮೊದಲೇ ಅವರ ಸಚಿವ ಸ್ಥಾನಕ್ಕೆ ಕ್ರಾಂತಿಯಾಗಿದೆ. ಸಹಕಾರ ಸಚಿವರಾಗಿದ್ದ ಅವರು ರಾಹುಲ್ ಗಾಂಧಿ ಮತಗಳ್ಳತನ ಆರೋಪದ ವಿರುದ್ಧ ಹೇಳಿಕೆ ನೀಡಿದ್ರು. ರಾಜಣ್ಣ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ರಾಜಣ್ಣ, ಸೆಪ್ಟೆಂಬರ್ ಕ್ರಾಂತಿಗೂ ಮೊದಲೇ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಮತಗಳ್ಳತನ ಆರೋಪದ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ್ದ ಸಚಿವ ಕೆ.ಎನ್.ರಾಜಣ್ಣ, ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದರು. ಮತಪಟ್ಟಿ ಅಕ್ರಮಗಳು ನಡೆದಿರುವುದು ಸತ್ಯ. ಆದರೆ, ಆ ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದಲ್ಲ. ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟಾಗಿತ್ತು.
ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಭೇಟಿ ನೀಡಿ ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಸಚಿವರು, ಸಂಸದರು, ಶಾಸಕರು ಹಾಗೂ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರತಿಭಟಿಸಿದ್ದರು. ಹೀಗಿರುವಾಗ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಜಣ್ಣ ಅವರೇ ಈ ಪ್ರತಿಭಟನೆ ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆಗೆ ಪಕ್ಷದಿಂದ ಒತ್ತಾಯ ಹೆಚ್ಚಾಗಿತ್ತು.
