ರಾಜ್ಯದ ಕೆಲವೆಡೆ ಚಳಿಯ ಅನುಭವ ಹೆಚ್ಚಾಗುತ್ತಿದ್ದು, ಜನ ಗಡಗಡ ನಡಗುತ್ತಿದ್ದಾರೆ. ಅದರಲ್ಲೂ ಉತ್ತರ ಒಳನಾಡಿನ ಕೆಲವೆಡೆ ಭಾರೀ ಚಳಿಯ ಅನುಭವವಾಗುತ್ತಿದ್ದು, ಜನ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರದಿಂದ ಎರಡು ದಿನಗಳ ಕಾಲ ರಾಜ್ಯದ ಹಲವೆಡೆ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 5 ಜಿಲ್ಲೆಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಭಾನುವಾರದಂದು ಬೀದರ್ ನಲ್ಲಿ ದಾಖಲೆಯ 5 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿತ್ತು.
ಸೋಮವಾರದಿಂದ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಶೀತಗಾಳಿ ಬೀಸಲಿದೆ.
ಡಿ. 22 ರಂದು ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ, ಬೀದರ್ ನಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಜಿಲ್ಲೆಗಳ ಪೈಕಿ ಬೀದರ್ ಮೊದಲ ಸ್ಥಾನದಲ್ಲಿದೆ. ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಅಂಕಿ ಅಂಶಗಳ ಪ್ರಕಾರ, ಶನಿವಾರದಿಂದ ಭಾನುವಾರದವರೆಗೆ ಬೀದರ್ ನಲ್ಲಿ 5.5ರಷ್ಟು ಉಷ್ಣಾಂಶ ದಾಖಲಾಗಿದೆ. ಇನ್ನುಳಿದಂತೆ ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಗದಗ, ಹಾವೇರಿ, ಮಲೆನಾಡಿನ ಚಿಕ್ಕಮಗಳೂರು, ಕರಾವಳಿಯ ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳು ಇವೆ.

