Site icon BosstvKannada

ಮಾಸ್ಕ್‌ ಮ್ಯಾನ್‌ ಅರೆಸ್ಟ್‌.. ಬಿಜೆಪಿಗೆ ಡಿಕೆಶಿ ಟಾಂಗ್‌ : ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ, ಡಿಕೆ ವಾರ್ನಿಂಗ್!‌

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ದೂರು ಪ್ರಕರಣ‍ಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ದೂರುದಾರ ಮಾಸ್ಕ್ ಮ್ಯಾನ್ ನನ್ನ ಎಸ್ ಐಟಿ ಬಂಧಿಸಿದೆ. ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಧರ್ಮದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರ ನಿಷ್ಪಕ್ಷವಾದ ತನಿಖೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಆರಂಭದಲ್ಲಿ ಬಿಜೆಪಿಯವರು ಏನನ್ನೂ ಮಾತನಾಡಿರಲಿಲ್ಲ. ಅಡ್ಡೆಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವ ಕೆಲಸ ಮಾಡಿದರು. ನಾನು ಷಡ್ಯಂತ್ರ ನಡೆದಿದೆ ಎಂದು ಹೇಳಿದ ಮೇಲೆ ಈಗ ಚರ್ಚೆ ಮಾಡುತ್ತಿದ್ದಾರೆ ಎಂದರು. ಸತ್ಯ ಹೊರ ಬರುತ್ತೆ. ಈಗಾಗಲೇ ಪ್ರಕರಣ ಕುರಿತು ಸಿಎಂ ಮತ್ತು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ನಾವು ಯಾರ ಪರವೂ ಅಲ್ಲ. ನ್ಯಾಯದ ಪರ, ಎಸ್ ಐಟಿ ತನಿಖೆ ಬಗ್ಗೆ ಗೃಹ ಸಚಿವರು ನೋಡಿಕೊಳ್ಳುತ್ತಾರೆ ಎಂದರು. ಅನನ್ಯಭಟ್‌ ವಿಚಾರವಾಗಿ ಗೊಂದಲದ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳ ಕುರಿತು ಗೃಹ ಸಚಿವರು ಗಮನ ಹರಿಸುತ್ತಾರೆ ಎಂದು ತಿಳಿಸಿದರು.

ನನಗೆ ಮೊದಲಿನಿಂದಲೂ ನಂಬಿಕೆಯಿತ್ತು. ಆದರೂ ತನಿಖೆಗೆ ಯಾವತ್ತೂ ಅಡ್ಡಿ ಪಡಿಸಲಿಲ್ಲ. ಧರ್ಮಸ್ಥಳದ ಕುಟುಂಬದವರೇ ಖುದ್ದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಸ್‌‍ಐಟಿ ತನಿಖೆಯವರನ್ನು ಸ್ವಾಗತಿಸಿದರು. ವಿಚಾರಣೆ ನಡೆಯುತ್ತಿದ್ದು, ಯಾರೆಲ್ಲ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ನಮ್ಮ ಸರ್ಕಾರ ಮೊದಲಿನಿಂದಲೂ ಹೇಳುತ್ತಾ ಬಂದಿದೆ.

Read Also : ಕಳಚಿತು ಮಾಸ್ಕ್‌ಮ್ಯಾನ್‌ ಮುಖವಾಡ, ಬುರುಡೆ ಬಿಟ್ಟ ಶೂರನ ಬಂಧನ!

ಗೃಹಸಚಿವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ವಿಧಾನಸಭೆ ಮತ್ತು ಕಾಂಗ್ರೆಸ್‌‍ ಶಾಸಕಾಂಗ ಸಭೆಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ನಾವು ಅವರು ಅಥವಾ ಇವರು ಎಂಬ ಯಾರ ಪರವೂ ಇಲ್ಲ. ನ್ಯಾಯದ ಪರವಾಗಿ ಇದ್ದೇವೆ. ಧರ್ಮದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಹೇಳಿದರು.

Exit mobile version