ಬೆಂಗಳೂರು: ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಬೆಂಗಳೂರಿನ (Bengaluru) ನೇರಳೆ ಮಾರ್ಗದ (Purple Line) ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ (Kengeri Metro Station) ಈ ದುರ್ಘಟನೆ ನಡೆದಿದೆ. ಹೀಗಾಗಿ ಬೆಳಗ್ಗೆ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಕುರಿತು ಬಿಎಂಆರ್ ಸಿಲ್ ಬಹಿರಂಗವಾಗಿ ಹೇಳಿಕೊಂಡಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ವಿಜಯಪುರ (Vijayapura) ಮೂಲದ ಶಾಂತಗೌಡ ಪಾಟೀಲ್ (38) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ನಗರದ ರಾಜಾಜಿನಗರದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸಿಸುತ್ತಿದ್ದ. ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಈ ವ್ಯಕ್ತಿ ರೈಲು ಬರುತ್ತಿದ್ದಂತೆ ಟ್ರ್ಯಾಕ್ ಗೆ ಹಾರಿದ್ದಾನೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈಗ ಮೆಟ್ರೋ ತನ್ನ ಸಂಚಾರ ಮುಂದುವರೆಸಿದೆ ಎಂದು ತಿಳಿದು ಬಂದಿದೆ.
