Site icon BosstvKannada

LPG ಅಭಾವ : ಐಪಿಎಲ್ ವೇಳಾಪಟ್ಟಿಗೆ ಅಡ್ಡಗಾಲು!

ಬೆಂಗಳೂರು, ಮಾ.11: ಕಳೆದ ಒಂದು ವರ್ಷದಿಂದ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಒಗ್ಗಟ್ಟಿನಿಂದ ಚಿಯರ್ ಮಾಡುತ್ತಿದ್ದ ಅಭಿಮಾನಿಗಳು ಈಗ ಮತ್ತೆ ತಮ್ಮ ನೆಚ್ಚಿನ ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಬೆಂಬಲಿಸುವ ಮೂಲಕ ವಿವಿಧ ಗುಂಪುಗಳಾಗಿ ವಿಭಜನೆಯಾಗುವ ಸಮಯ ಹತ್ತಿರ ಬಂದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ತನ್ನ ಟಿ-20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭರ್ಜರಿ ಯಶಸ್ಸು ಕಂಡಿತು. ಸ್ವದೇಶದಲ್ಲಿ ವಿಶ್ವಕಪ್ ಗೆದ್ದ ಬೆನ್ನಲ್ಲೇ ಐಪಿಎಲ್ 19ನೇ ಆವೃತ್ತಿ ಆರಂಭವಾಗುತ್ತಿರುವುದರಿಂದ ಈ ಬಾರಿ ವೀಕ್ಷಕರು ಮತ್ತು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ತಿಂಗಳ ಅಂತ್ಯದವರೆಗೆ ನಡೆಯುವ ಈ ಐಪಿಎಲ್ ಕ್ರಿಕೆಟ್ ಲೀಗ್‌ಗೆ ಈ ಬಾರಿ ಕೆಲವು ಅನಿವಾರ್ಯ ಕಾರಣಗಳಿಂದ ಕಾರ್ಮೋಡ ಎದುರಾಗುವ ಸಂಭವವಿದೆ.

ಐಪಿಎಲ್ 2026 ವಿಳಂಬಕ್ಕೆ ಕಾರಣಗಳೇನು?
ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಸಂಘರ್ಷದಿಂದ ಇಂಧನ ಬಿಕ್ಕಟ್ಟು :
ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅರೇಬಿಯನ್ ಗಲ್ಫ್‌ನ ಬಹುತೇಕ ವಾಯುಪ್ರದೇಶಗಳು ಮುಚ್ಚಲ್ಪಟ್ಟಿವೆ. ಇದು ವಿಮಾನಯಾನ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಅಷ್ಟೇ ಅಲ್ಲದೆ, ಸಮುದ್ರ ಮಾರ್ಗಗಳ ಅಡಚಣೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕುರಿತು ಮಾತನಾಡಿರುವ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್, ದೇಶದಾದ್ಯಂತ ಉಂಟಾಗಿರುವ ಎಲ್‌ಪಿಜಿ ಕೊರತೆಯ ಪರಿಸ್ಥಿತಿಯನ್ನು ಐಪಿಎಲ್ ಆಡಳಿತ ಮಂಡಳಿಯ ಎಲ್ಲಾ ಪಾಲುದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ ನಂತರವೇ ಐಪಿಎಲ್ ವೇಳಾಪಟ್ಟಿ ಪ್ರಕಟಣೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು:
ಈ ಬಾರಿ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ತವರು ರಾಜ್ಯಗಳಲ್ಲೇ ಚುನಾವಣೆ ಇರುವುದರಿಂದ, ಪಂದ್ಯಗಳಿಗೆ ಅಗತ್ಯವಿರುವ ಭದ್ರತೆಯನ್ನು ಒದಗಿಸುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ, ಐಪಿಎಲ್ ವೇಳಾಪಟ್ಟಿ ಪ್ರಕಟಣೆ ಉಂಟಾಗಿರುವ ಸಮಸ್ಯೆಗಳಲ್ಲಿ ಇದು ಸಹ ಒಂದಾಗಿದೆ.

ವೇಳಾಪಟ್ಟಿಯ ಸಂಭಾವ್ಯ ದಿನಾಂಕಗಳು:
ಟೂರ್ನಿ ಆರಂಭಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದರೂ, ಐಪಿಎಲ್ ಆಡಳಿತ ಮಂಡಳಿ ಇದುವರೆಗೆ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಮಾರ್ಚ್ 28 ರಿಂದ 19ನೇ ಆವೃತ್ತಿಯ ಐಪಿಎಲ್ ಅಧಿಕೃತವಾಗಿ ಆರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ವಿಶ್ವಕಪ್ ಗೆಲುವಿನ ಅಮಲೇರಿಸಿರುವ ಅಭಿಮಾನಿಗಳು ಈಗ ತಮ್ಮ ನೆಚ್ಚಿನ ಸ್ಟಾರ್ ಆಟಗಾರರು ಐಪಿಎಲ್ ಅಖಾಡದಲ್ಲಿ ಪರಸ್ಪರ ಸೆಣಸಾಡುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Exit mobile version