Site icon BosstvKannada

2025ರ ಫ್ಲವರ್‌ ಶೋಗೆ ಲಾಲ್‌ಬಾಗ್‌ ಸಜ್ಜು.. ಫಲಪುಷ್ಪ ಪ್ರದರ್ಶನದ ಥೀಮ್‌ ಏನು?

ಪ್ರತಿ ವರ್ಷದಂತೆ ಈ ವರ್ಷವು ಸಿಲಿಕಾನ್‌ ಸಿಟಿಯ ಫ್ಲವರ್‌ ಶೋಗೆ ಲಾಲ್‌ಬಾಗ್‌ ಸಜ್ಜಾಗಿದೆ. ಸಸ್ಯಕಾಶಿ ಲಾಲಾಬಾಗ್‌ನಲ್ಲಿ ನಡೆಯುವ ಫ್ಲವರ್‌ ಶೋಗೆ ಭರ್ಜರಿ ತಯಾರಿ ನಡೆದಿದೆ. ತೋಟಗಾರಿಕೆ ಇಲಾಖೆಯಿಂದ ಪ್ರತಿ ವರ್ಷ ಒಂದಲ್ಲಾ ಒಂದು ಡಿಫರೆಂಟ್‌ ಥೀಮ್‌ನೊಂದಿಗೆ ಫಲ ಪುಷ್ಪಪ್ರದರ್ಶನ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ. ಈ ವರ್ಷವೂ ಕೂಡ ವಿಭಿನ್ನ ಥೀಮ್‌ನಲ್ಲಿ ಫ್ಲವರ್‌ ಶೋ ಮೂಡಿಬರಲಿದ್ದು, ಸಿಲಿಕಾನ್‌ ಸಿಟಿ ಜನರನ್ನ ಮತ್ತಷ್ಟು ಆಕರ್ಷಿಸಲಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ ಈ ಬಾರಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. 36.5 ಲಕ್ಷ ಹೂವುಗಳಲ್ಲಿ ತಯಾರಿಸಲಾದ ವರ್ಣರಂಜಿತ ಫಲ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಚಾಲನೆ ನೀಡಲಿದ್ದಾರೆ. ನಾಳೆಯಿಂದ 18 ರವರೆಗೆ 12 ದಿನಗಳ ಕಾಲ ಪ್ರದರ್ಶನ ಇರಲಿದೆ.

ಈ ಬಾರಿ ಗಾಜಿನ ಮನೆಯ ಪ್ರಮುಖ ಆಕರ್ಷಣೆ ಕಿತ್ತೂರಿನ ಬೃಹತ್ ಹೂವಿನ ಕೋಟೆಯಾಗಿದ್ದು, ಗುಲಾಬಿ ಮತ್ತು ಸೇವಂತಿ ಹೂವುಗಳಿಂದ ತಯಾರಿಸಲಾಗಿದೆ. ಇದರ ಜೊತೆಗೆ ಕುದುರೆಯ ಮೇಲಿರುವ ರಾಣಿ ಚೆನ್ನಮ್ಮ ಮತ್ತು ಖಡ್ಗ ಹಿಡಿದು ನಿಂತಿರುವ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆಗಳು ಅನಾವರಣಗೊಳ್ಳಲಿವೆ. ಕಿತ್ತೂರಿನಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಸಮಾಧಿ ಸ್ಥಳವನ್ನು ಹೂಗಳನ್ನು ಬಳಸಿ ಮರುಸೃಷ್ಟಿಸಲಾಗಿದೆ. ಕಿತ್ತೂರು ಸಂಸ್ಥಾನದ ಇತಿಹಾಸ, ಅದರ ಆಡಳಿತಗಾರರು, ಅವರು ಹೋರಾಟ, ಕೊಡುಗೆಗಳು ಹಾಗೂ ಅವನತಿ ತಿಳಿಸುವ 60 ದೊಡ್ಡ ಪ್ರದರ್ಶನ ಫಲಕಗಳನ್ನು ಸ್ಥಾಪಿಸಲಾಗುವುದು ಎಂದು ತೋಟಗಾರಿಕಾ ಜಂಟಿ ನಿರ್ದೇಶಕ ಎಂ ಜಗದೀಶ ತಿಳಿಸಿದರು.

Exit mobile version