Site icon BosstvKannada

ಕುಂದಾಪ್ರ ಕನ್ನಡ ಹಬ್ಬ.. ಈ ಬಾರಿ ವಿಶೇಷತೆ ಏನು?

ಪ್ರತಿ ವರ್ಷದಂತೆ ಈ ವರ್ಷವೂ ಕುಂದಾಪ್ರ ಕನ್ನಡ ಹಬ್ಬ ಅದ್ಧೂರಿಯಾಗಿ ನಡೆಯಲಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತೆ. ಇದಕ್ಕಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ದಿನಾಂಕವನ್ನು ನಿಗದಿಮಾಡಿದೆ. ಇದೇ ಬರುವ ಜುಲೈ 26, 27ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್‌ನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪ್ರ ಕನ್ನಡ ಹಬ್ಬ-2025 ಕಾರ್ಯಕ್ರಮ ನಡೆಯಲಿದೆ.

ಕುಂದಾಪುರ ಸೇರಿದಂತೆ ಕರಾವಳಿ ಭಾಗದ ವಿಶಿಷ್ಟ ಹಬ್ಬವಾಗಿ ಮೂಡಿ ಬರಲಿರುವ ಈ ಕಾರ್ಯಕ್ರಮಕ್ಕೆ ಸಂಘಟಕರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ಎರಡೂ ದಿನ ಕುಂದಾಪುರ ಮೂಲದ ಒಬ್ಬೊಬ್ಬರು ಅತಿಗಣ್ಯ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತೆ. ವಿವಿಧ ಸಾಂಪ್ರದಾಯಿಕ ಕ್ರೀಡೆಗಳು ಸೇರಿದಂತೆ ಕುಂದಾಪುರದ ಬಹುತೇಕ ಎಲ್ಲ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಕೂಡ ಇರಲಿದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್‌ ಶೆಟ್ಟಿ ತಿಳಿಸಿದ್ದಾರೆ.

ಎಂದಿನಂತೆ ಈ ಸಲ ಕುಂದಾಪ್ರ ಕನ್ನಡ ಹಬ್ಬವನ್ನು ಹಲವು ವಿಶೇಷತೆಗಳೊಂದಿಗೆ ಆಚರಿಸಲಿದ್ದು, ಈ ಬಾರಿ ಕೂಡ ಭಾರೀ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಅದರಲ್ಲೂ ಈ ಬಾರಿ 5 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಈ ಸಂಭ್ರಮದಲ್ಲಿ ದಿನವಿಡೀ ಕಾರ್ಯಕ್ರಮಗಳಿದ್ದು, ಮತ್ತೊಂದು ಅದ್ಧೂರಿಗೆ ಈ ಸಮಾರಂಭ ಸಾಕ್ಷಿಯಾಗಲಿದೆ.

Exit mobile version