ಕಳೆದ ವರ್ಷ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಲ್ಲಿ ನಡೆದ ಅತ್ಯಾಚಾರ ಕೇಸ್ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಅತ್ಯಾಚಾರ ಪ್ರಕರಣಕ್ಕೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಆದ್ರೀಗ ಈ ಕೃತ್ಯ ನೆನಪಿಸುವಂತೆ ಇಂತಹದ್ದೇ ಘಟನೆ ಮತ್ತೆ ಕೊಲ್ಕತ್ತಾದಲ್ಲೇ ನಡೆದಿದೆ.
ದಕ್ಷಿಣ ಕೋಲ್ಕತ್ತಾದ ಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಮೇಲೆ ಅದೇ ಸಂಸ್ಥೆಯ ಹಳೆಯ ವಿದ್ಯಾರ್ಥಿ ಮತ್ತು ಇಬ್ಬರು ಸಿನಿಯರ್ ಸ್ಟೂಡೆಂಟ್ಸ್ ಸೇರಿ ಕಾಲೇಜು ಆವರಣದಲ್ಲೇ ಅತ್ಯಾಚಾರ ನಡೆಸಿದ್ದಾರೆ.
ಟಿಎಂಸಿ ಕಾರ್ಯಕರ್ತ, ಇಬ್ಬರು ವಿದ್ಯಾರ್ಥಿಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿಯ ಯುವ ನಾಯಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಮೊನೊಜಿತ್ ಮಿಶ್ರಾ ತೃಣಮೂಲ ಕಾಂಗ್ರೆಸ್ ಛತ್ರ ಪರಿಷತ್ (ಟಿಎಂಸಿಪಿ)ನ ಸಂಘಟನಾ ಕಾರ್ಯದರ್ಶಿ ಎಂದು ಗುರುತಿಸಲಾಗಿದೆ.
ಈತ ಲಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದನು. ಇನ್ನುಳಿದ ಇಬ್ಬರು ಆರೋಪಿಗಳನ್ನು ಕಾಲೇಜಿನ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಜೈಬ್ ಅಹ್ಮದ್ (19) ಮತ್ತು ಪ್ರಮಿತ್ ಮುಖೋಪಾಧ್ಯಾಯ (20) ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ.
ಕ್ರಿಮಿನಲ್ ವಕೀಲನಾಗಿರುವ ಮಿಶ್ರಾ
2022ರಲ್ಲಿ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಿಂದ ಪದವಿ ಪಡೆದಿರುವ ಪ್ರಮುಖ ಆರೋಪಿ ಮಿಶ್ರಾ, ಕ್ಯಾಂಪಸ್‌ನಲ್ಲಿ ತನ್ನ ಪ್ರಭಾವ ಉಳಿಸಿಕೊಂಡಿದ್ದಾನೆ. ಪದವಿ ಪಡೆದ ಬಳಿಕ ಆತ ಅಲಿಪೋರ್ ಪೊಲೀಸ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಹಲವಾರು ಹಲ್ಲೆ ಘಟನೆಗಳಲ್ಲಿ ಭಾಗಿಯಾಗಿರುವ ಆತನನ್ನು ಸಂಸ್ಥೆಯಲ್ಲಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯಾಗಿ ಕಾಲೇಜು ಉಪ ಪ್ರಾಂಶುಪಾಲರಾದ ನೊಯ್ನಾ ಚಟರ್ಜಿ ಅವರು ನೇಮಿಸಿದ್ದರು. ಘಟನೆ ಕುರಿತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಪರೀಕ್ಷೆಗಳಿಗೆ ಸಂಬಂಧಿಸಿ ತಯಾರಿ ನಡೆಸುತ್ತಿದ್ದ 24 ವರ್ಷದ ಯುವತಿ ಬುಧವಾರ ಮಧ್ಯಾಹ್ನ ಕಾಲೇಜಿಗೆ ಬಂದಿದ್ದಳು. ಆಕೆ ಕಾಲೇಜಿನ ಯೂನಿಯನ್ ಕೋಣೆಯೊಳಗಿದ್ದಾಗ ಕ್ಯಾಂಪಸ್ ಗೇಟ್‌ಗೆ ಬೀಗ ಹಾಕಲು ಆದೇಶಿಸಿ ಬಂದಿದ್ದ ಮಿಶ್ರಾ ಆಕೆಯ ಬಳಿ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸುವಂತೆ ಕೇಳಿಕೊಂಡಿದ್ದಾನೆ. ಅದಕ್ಕೆ ಯುವತಿ ತಿರಸ್ಕರಿಸಿದಾಗ ಬಲವಂತ ಮಾಡಿದ್ದಾನೆ. ಯುವತಿ ಅಳುತ್ತಾ ತನ್ನನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಕೇಳಿದಳು. ಕೊನೆಗೆ ತಾನು ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದರೂ ಮಿಶ್ರಾ ಕೇಳಲಿಲ್ಲ. ನನ್ನ ಮೇಲೆ ಬಲವಂತವಾಗಿ ಕೃತ್ಯ ಎಸಗಿದ್ದಾನೆ.
ಸಂತ್ರಸ್ತೆಯಿಂದ ಕೇಸ್ ದಾಖಲು
ಯುವತಿಯ ಗೆಳೆಯನನ್ನು ಕೊಲ್ಲುವುದಾಗಿ ಹೇಳಿದ ಮಿಶ್ರಾ, ಬಳಿಕ ಆಕೆಯ ಹೆತ್ತವರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ತನಗೆ ಹಾಕಿ ಸ್ಟಿಕ್‌ನಿಂದ ಹೊಡೆದಿದ್ದು ಆಗ ತನಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇನ್ಹೇಲರ್ ಕೇಳಿದಾಗ ಅದನ್ನು ಕೊಟ್ಟರು. ನಾನು ಸ್ವಲ್ಪ ಸುಧಾರಿಸಿದ ಬಳಿಕ ವಿದ್ಯಾರ್ಥಿ ಸಂಘದ ಕಚೇರಿಯ ಪಕ್ಕದಲ್ಲಿರುವ ನೆಲ ಮಹಡಿಯಲ್ಲಿರುವ ಭದ್ರತಾ ಸಿಬ್ಬಂದಿಯ ಕೋಣೆಗೆ ಕರೆದೊಯ್ದು ಮಿಶ್ರಾ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆಗ ಉಳಿದ ಇಬ್ಬರು ಪಕ್ಕದಲ್ಲಿ ನಿಂತು ನೋಡುತ್ತಿದ್ದರು ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಯುವತಿಗೆ ಆರೋಪಿಗಳಿಂದ ಬೆದರಿಕೆ
ಮೂವರು ಆರೋಪಿಗಳು ಘಟನೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಘಟನೆಯ ಕುರಿತು ಯಾರಿಗಾದರೂ ಹೇಳಿದರೆ ಅದನ್ನು ಇಂಟರ್ನೆಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿದ್ದಾಳೆ.
ಪ್ರಕರಣದ ತನಿಖೆ
ಆರೋಪಿಗಳು ರಾತ್ರಿ 10 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ವಿಧಿವಿಜ್ಞಾನ ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಬೇಕು
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿಪಿ ರಾಜ್ಯ ಅಧ್ಯಕ್ಷ ತೃಣಂಕೂರ್ ಭಟ್ಟಾಚಾರ್ಯ, “ತೃಣಮೂಲ ಪಕ್ಷದ ಯಾರೇ ಆದರೂ ಈ ಘಟನೆಯಲ್ಲಿ ಭಾಗಿಯಾಗಿರಲಿ ಅಥವಾ ಇಲ್ಲದಿರಲಿ, ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಆರೋಪಿತ ವ್ಯಕ್ತಿ ಪ್ರಸ್ತುತ ಕಾಲೇಜಿನ ಉದ್ಯೋಗಿ, ಆತ ವಿದ್ಯಾರ್ಥಿ ಪರಿಷತ್ತಿನೊಂದಿಗೆ ಸಂಬಂಧ ಹೊಂದಿಲ್ಲ. ಈ ಘಟನೆ ಮತ್ತು ಆರೋಪ ನಿಜವಾಗಿದ್ದರೆ, ಅವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ಕೊಡಿಸಲು ಟಿಎಂಸಿ ಹೋರಾಟ ನಡೆಸುತ್ತದೆ ಎಂದಿದ್ದಾರೆ. ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

