
ನಮ್ಮ ಮೆಟ್ರೋ ಸದಾ ಒಂದಿಲ್ಲೊಂದು ಕಾರಣಕ್ಕೆ ವಿವಾದದ ಕೇಂದ್ರ ಬಿಂದು ಆಗ್ತಾನೆ ಇರುತ್ತೆ. ಇದೀಗ ಹೊಸ ವಿವಾದ ಸೃಷ್ಟಿಯಾಗಿದ್ದು, ಕನ್ನಡಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಕನ್ನಡದ ಅಸ್ಮಿತೆ ನಂದಿನಿ (KMF Nandini) ಮತ್ತೊಮ್ಮೆ ಬೆಂಗಳೂರಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಯ್ತಾ ಎಂಬ ಪ್ರಶ್ನೆ ಎದ್ದಿದೆ. ನಗರದ 10 ಪ್ರಮುಖ ಮೆಟ್ರೋ (namma metro) ನಿಲ್ದಾಣಗಳಲ್ಲಿ ಜನಪ್ರಿಯ ಡೈರಿ ಕಂಪನಿ ಅಮುಲ್ (Amul) ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಗುಜರಾತ್ (Gujarat) ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಲಿಮಿಟೆಡ್‌ನೊಂದಿಗೆ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್. ಎಂ ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ನಿಲ್ದಾಣಗಳಲ್ಲಿ ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಅಮುಲ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬಿಎಂಆರ್‌ಸಿಎಲ್ ತನ್ನ ಹೌಸ್ ಜರ್ನಲ್‌ನಲ್ಲಿ ಉಲ್ಲೇಖಿಸಿದೆ.
ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಬಿಎಂಆರ್‌ಸಿಎಲ್ (BMRCL) ಈ ನಡೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ್ದೇ ಆದ ಕೆಎಂಎಫ್ ನಂದಿನಿ ಇರುವಾಗ ಗುಜರಾತ್ ಮೂಲದ ಅಮುಲ್‌ಗೆ ಯಾಕೆ ಅವಕಾಶ ಕೊಡ್ಬೇಕಿತ್ತು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ವಿವಾದ ಜೋರಾಗ್ತಿದ್ದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (dk shivakumar) ಸ್ಪಷ್ಟನೆ ನೀಡಿದ್ದಾರೆ. ಕೇವಲ ಎರಡು ನಿಲ್ದಾಣಗಳಲ್ಲಿ ಮಾತ್ರ ಅಮುಲ್‌ಗೆ ಅವಕಾಶ ನೀಡಲಾಗಿದೆ, ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳಿಗೆ ಕೆಎಂಎಫ್‌ಗೆ ಟೆಂಡರ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.