BosstvKannada

kempegowda jayanti : ನಾಡಿನೆಲ್ಲೆಡೆ ಕೆಂಪೇಗೌಡರ ಜನುಮದಿನದ ಸಂಭ್ರಮ

ಇಂದು ರಾಜ್ಯದೆಲ್ಲೆಡೆ ನಾಡಪ್ರಭು ಕೆಂಪೇಗೌಡರ (kempegowda jayanti) ಜನ್ಮೋತ್ಸವ ಸಂಭ್ರಮ ಮನೆಮಾಡಿದೆ. ನಾಡಪ್ರಭು ಕೆಂಪೇಗೌಡರ 516ನೇ ಜನದಿನೋತ್ಸವ ಅಂಗವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ಇಂದು ಸರಣಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಂಭ್ರಮ ಹಾಗೂ ಸಡಗರದಿಂದ ನಾಡಿನಾದ್ಯಂತ ಆಚರಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕೆಂಪೇಗೌಡರ ಪ್ರತಿಮೆಗೆ ಪೂಜೆ ಸಲ್ಲಿಸಿ ನಮನ ಅರ್ಪಿಸಲಾಗಿದೆ. ಬೆಂಗಳೂರು ನಿರ್ಮಾತೃ ಹಾಗೂ ದಕ್ಷ ಆಡಳಿತಗಾರ ಕೆಂಪೇಗೌಡರ ಸರಣೆಯ ಮೂಲಕ ಅರ್ಥಪೂರ್ಣ ಆಚರಣೆಗಳು ನಡೆದವು.

ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದ ಅಂಗವಾಗಿ 3 ಕಡೆ ಕೆಂಪೇಗೌಡ ಪ್ರತಿಮೆಗಳಿಗೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಲಕ್ಷ್ಮೀದೇವಮ ಅವರ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಮತ್ತಿತರ ಗಣ್ಯರುಗಳು ಪುಷ್ಪನಮನ ಸಲ್ಲಿಸಿದರು. ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಮೀಸಲಿಟ್ಟಿರುವ ಸುಮನಹಳ್ಳಿ ಸಮೀಪದ ನಾಲ್ಕು ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು ಸೇರಿದಂತೆ ಹೊರವಲಯಗಳಲ್ಲಿ 7 ಕಡೆಗಳಿಂದ ಪುರಜ್ಯೋತಿ ಯಾತ್ರೆ ನಡೆಯಿತು. ನಗರದ ಹಲವೆಡೆ ಕೆಂಪೇಗೌಡರ ಪುತ್ಥಳಿ ಹಾಗೂ ಭಾವಚಿತ್ರಗಳ ಮೆರವಣಿಗೆ ನಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಐತಿಹಾಸಿಕ ಬೃಹತ್‌ ಪ್ರತಿಮೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಲಾರ್ಪಣೆ ಮಾಡಿದರು. ಶ್ರೀ ಆದಿ ಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೃಷ್ಣ ಭೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್‌, ವಿಮಾನನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪ್ರತಿಮೆಗೆ ಈ ವರ್ಷದಿಂದ ಮಾಲಾರ್ಪಣೆ ಮಾಡುವ ಪರಿಪಾಠವನ್ನು ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೆಂಗಳೂರಿನ ಉಸ್ತುವಾರಿ ಇರುವವರು ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಇಲ್ಲಿನ ಪ್ರತಿಮೆಗೆ ಗೌರವ ಸಲ್ಲಿಸಬೇಕು. ನಂತರ ಉಳಿದ ಕಾರ್ಯಕ್ರಮಗಳನ್ನು ಆರಂಭಿಸಬೇಕು ಎಂಬ ರೂಢಿಯನ್ನು ಆರಂಭಿಸಲಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡ ಥೀಂ ಪಾರ್ಕ್‌ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಚಿವ ಕೃಷ್ಣಭೈರೇಗೌಡರಿಗೆ ಜವಾಬ್ದಾರಿ ವಹಿಸಲಾಗಿದ್ದು, 2-3 ತಿಂಗಳಲ್ಲಿ ಎಲ್ಲಾ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಈವರೆಗೂ ಅದಕ್ಕಾಗಿ ಹಣಕಾಸು ಬಿಡುಗಡೆಯಾಗಿರಲಿಲ್ಲ. ಯೋಜನೆ ಸೇರಿದಂತೆ ಇತರ ವಿಚಾರಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದರು.

ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ನಿರ್ಮಿಸಲಾಗಿರುವ ಬೃಹತ್‌ ಪ್ರತಿಮೆಯನ್ನು ಸಂರಕ್ಷಿಸುವುದು ಸರ್ಕಾರ ಮತ್ತು ವಿಮಾನನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಇನ್ನು ಮುಂದೆ ಪ್ರತಿವರ್ಷವೂ ಇಲ್ಲಿಂದಲೇ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಅಲ್ಲಿ ಭವ್ಯ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.ಬೆಂಗಳೂರಿನ ವಾತಾವರಣ ಹಾಗೂ ಸ್ಥಾನಮಾನಗಳನ್ನು ಮನಗಂಡು ಕೆಂಪೇಗೌಡರು ನಗರ ನಿರ್ಮಾಣ ಮಾಡಿದರು. ಇಲ್ಲದೇ ಹೋದರೆ ನಾವ್ಯಾರೂ ಇಲ್ಲಿರುತ್ತಿರಲಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಬಳಿಕ ಬಿಬಿಎಂಪಿಯ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಹಾಗೂ ಲಕ್ಷ್ಮೀದೇವಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ವಿಧಾನಸೌಧದ ಮುಂದಿರುವ ಕೆಂಪೇಗೌಡರ ಪ್ರತಿಮೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಬ್ಬರೂ ಪುಷ್ಪನಮನ ಸಲ್ಲಿಸಿದ್ದಾರೆ. ಬೆಂಗಳೂರಿನ 7 ಭಾಗಗಳಿಂದಲೂ ಆಗಮಿಸಿರುವ ಪುರಜ್ಯೋತಿಗಳನ್ನು ಸುಮನಹಳ್ಳಿ ಸರ್ಕಲ್‌ ಬಳಿ ಡಿ.ಕೆ.ಶಿವಕುಮಾರ್‌ ಸ್ವೀಕರಿಸಿದರು.

ಇದೇ ವೇಳೆ ಕೆಂಪೇಗೌಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಾಬು ಜಗಜೀವನರಾಮ್‌ ಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.

Exit mobile version