BosstvKannada

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ!

ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ವೇದಾ ಕೃಷ್ಣಮೂರ್ತಿ ಅವರು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. 32 ವರ್ಷದ ಕರ್ನಾಟಕದ ಬ್ಯಾಟರ್​ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿದಾಯ ಘೋಷಿಸಿದ್ದು, ತಮ್ಮ ಕ್ರಿಕೆಟ್ ಪ್ರಯಾಣದ ಭಾಗವಾಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.

ತಮ್ಮ ಇನ್​ಸ್ಟಾ ಖಾತೆಯಲ್ಲಿ, ದೊಡ್ಡ ಕನಸುಗಳನ್ನು ಹೊಂದಿರುವ ಸಣ್ಣ ಪಟ್ಟಣ ಕಡೂರಿನಿಂದ ಹಿಡಿದು ಹೆಮ್ಮೆಯಿಂದ ಭಾರತದ ಜೆರ್ಸಿ ಧರಿಸುವವರೆಗೆ ಪ್ರತಿಯೊಂದು ಹಂತದಲ್ಲೂ ಕ್ರಿಕೆಟ್​ ನನಗೆ ಹಲವು ಪಾಠಗಳನ್ನು ಕಲಿಸಿತು. ಈ ಜರ್ನಿಯಲ್ಲಿ ನನ್ನ ಜೊತೆಗೆ ನಿಂತ ಪ್ರತಿಯೊಬ್ಬರಿಗೂ ಕೃತಜ್ಞಳಾಗಿದ್ದೇನೆ. ಇದು ಆಟಕ್ಕೆ ವಿದಾಯ ಹೇಳುವ ಸಮಯ, ಆದರೆ ಕ್ರಿಕೆಟ್​ಗೆ ಅಲ್ಲ. ನಾನು ಭಾರತಕ್ಕಾಗಿ ಮತ್ತು ತಂಡಕ್ಕಾಗಿ ಸದಾ ಲಭ್ಯ ಇರುತ್ತೇನೆ ಎಂದು ತಿಳಿಸಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ವೇದಾ ಕೃಷ್ಣಮೂರ್ತಿ, 2017ರ ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. 2011ರಿಂದ 2020ರವರೆಗಿನ 11 ವರ್ಷಗಳ ವೃತ್ತಿಜೀವನದಲ್ಲಿ, 48 ಏಕದಿನ ಮತ್ತು 76 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ, ಏಕದಿನ ಸ್ವರೂಪದಲ್ಲಿ 829 ರನ್‌ ಮತ್ತು 875 ಟಿ20 ರನ್ ಗಳಿಸಿದ್ದಾರೆ. ಜೂನ್ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ 18ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವೇದಾ, ಚೊಚ್ಚಲ ಪಂದ್ಯದಲ್ಲೇ 51 ರನ್ ಗಳಿಸಿ ಪ್ರಭಾವ ಬೀರಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ 2020ರ ಟಿ20 ವಿಶ್ವಕಪ್​ ಫೈನಲ್‌ ಇವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

Exit mobile version