Advertisement

ಕರ್ನಾಟಕದಲ್ಲಿ ಕಮಲ್ ಹಾಸನ್ (Kamal Haasan) ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ `ಕನ್ನಡತಿ’ ಧಾರವಾಹಿ ಖ್ಯಾತಿಯ ರಂಜನಿ ರಾಘವನ್, ಕಮಲ್ ಹಾಸನ್ ಅವರಿಗೆ ತಾವು ಬರೆದ ಕನ್ನಡದ ಪುಸ್ತಕವನ್ನು ನೀಡಿ ರುವ ಪೋಸ್ಟ್ ಇನ್ಸ್ಟಾಗ್ರಾಂನಲ್ಲಿ ವೈರಲ್‌ ಆಗಿದೆ.

ಕಮಲ್ ಹಾಸನ್ ಅವರ ಕನ್ನಡ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಜೋರಾಗಿದೆ. ಅವರ ‘ಥಗ್ ಲೈಫ್’ ಸಿನಿಮಾವನ್ನು ಯಾವುದೇ ಕಾರಣಕ್ಕೂ ತೆರೆಕಾಣಲು ಬಿಡಬಾರದು ಎಂಬ ಆಕ್ರೋಶದ ಮಾತುಗಳು ಕೇಳಿಬಂದಿವೆ. ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಆ ಕುರಿತಂತೆ ಸಭೆ ನಡೆಸುತ್ತಿದೆ. ಈ ನಡುವೆ ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಕಮಲ್‌ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ ರಂಜನಿ

ಕಮಲ್ ಹಾಸನ್ ಅವರನ್ನು ಭೇಟಿ ಮಾಡಿರುವ ರಂಜನಿ ರಾಘವನ್ ಅವರು ಕೆಲ ಪುಸ್ತಕಗಳನ್ನು ಉಡೊಗೊರೆಯಾಗಿ ನೀಡಿದ್ದಾರೆ. ಕೆಲ ಸಮಯದ ಹಿಂದೆ ಬಿಡುಗಡೆಯಾದ ‘ಕಥೆ ಡಬ್ಬಿ’, ‘ಸ್ವೈಪ್ ರೈಟ್’ ಪುಸ್ತಕಗಳನ್ನು ಕಮಲ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ.

ಆ ಫೋಟೋಗಳನ್ನು ಹಂಚಿಕೊಂಡು, “ಕಮಲ್ ಸರ್‌ಗೆ ಕನ್ನಡ ಪುಸ್ತಕ” ಎಂದು ಕ್ಯಾಪ್ಷನ್ ನೀಡೋ ಮೂಲಕ ಕಮಲ್‌ ಹಾಸನ್‌ಗೆ ತಿರುಗೇಟು ನೀಡಿದ್ದಾರೆ. ಸದ್ಯ ಕಮಲ್‌ಗೆ ಪುಸ್ತಕಗಳನ್ನು ನೀಡಿದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಸದ್ಯ ಇವರ ಪೋಸ್ಟ್‌ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೈ ಕನ್ನಡಾಂಬೆ, ಕಮಲ್‌ಗೆ ಕನ್ನಡ ಪಾಠ ಕಲಿಸಿದ ಕನ್ನಡತಿ ಎಂಬೆಲ್ಲಾ ಕಾಮೆಂಟ್ ಸುರಿಮಳೆಗಳನ್ನೇ ಹರಿಸಿದ್ದಾರೆ.

Share.
Leave A Reply