ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ನಿಧನ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬಳಿಕ ಅವರ ಗೌರವಾರ್ಥ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ
ಶಿಬು ಸೊರೇನ್ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್, ಸೊರೇನ್ ಅವರು ಬುಡಕಟ್ಟು ಜನರ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ಹೋರಾಟದಲ್ಲಿ ಪ್ರಮುಖ ಧ್ವನಿಯಾಗಿದ್ದರು ಎಂದರು. ಸದನದಲ್ಲಿ ಮೌನಾಚಾರಣೆ ಮೂಲಕ ಸಂತಾಪ ಸಲ್ಲಿಸಲಾಯಿತು.
ಲೋಕಸಭೆ ಸ್ಪೀಕರ್ ಸಂತಾಪ
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಅವರ ನಿಧನ ತೀವ್ರ ದುಃಖ ತಂದಿದೆ. ಬುಡಕಟ್ಟು ಸಮಾಜ ಮತ್ತು ಜಾರ್ಖಂಡ್ ರಾಜ್ಯದ ಪ್ರಗತಿಗೆ ಹಾಗೂ ಸಾರ್ವಜನಿಕ ಜೀವನದಲ್ಲಿ ಅವರು ಅಗಾಧ ಪರಿಣಾಮ ಬೀರಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

