ಮಹಿಳಾ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ್ತಿ ಜಮಿಮಾ ರಾಡ್ರಿಗಸ್ ಈಗ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಸೀಸನ್ ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಂಡದ ನಾಯಕತ್ವ ಬದಲಾಯಿಸಲು ಮುಂದಾಗಿದೆ. ಮೆಗ್ ಲ್ಯಾನಿಂಗ್ ಕಳೆದ ಎರಡು ಸೀಸನ್ ಗಳಿಂದ ನಾಯಕಿಯಾಗಿದ್ದರು. ಆದರೆ, ಈಗ ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಗೆ ವಹಿಸುತ್ತಿದೆ.
ಈ ಕುರಿತು ಡಿ. 23ರಂದು ಅಧಿಕೃತ ಮಾಹಿತಿ ಹೊರ ಬರಲಿದೆ. 2 ಆವೃತ್ತಿಗಳಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಲಾಗಿದೆ. ಇದಾದ ನಂತರ ಜಮಿಮಾರನ್ನು ನಾಯಕಿಯಾಗಿ ಆಯ್ಕೆ ಮಾಡಿ ಘೋಷಿಸಲಾಗುವುದು ಎನ್ನಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ WPL 2026 ಆಟಗಾರರ ಹರಾಜಿನ ಸಂದರ್ಭದಲ್ಲಿ, DC ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ರೊಡ್ರಿಗಸ್‌ಗೆ ನಾಯಕತ್ವದ ಬಗ್ಗೆ ಸುಳಿವು ನೀಡಿದ್ದರು. ಮೆಗಾ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ, ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್‌ರನ್ನು ಖರೀದಿಸಿದಾಗ ಅವರಿಗೆ ನಾಯಕತ್ವ ಸಿಗಬಹುದು ಎಂಬ ಮಾತು ಕೇಳಿ ಬಂದಿದ್ದವು. ಆದರೆ, ಪಾರ್ಥ್ ಜಿಂದಾಲ್ ಭಾರತೀಯರನ್ನು ನಾಯಕಿಯಾಗಿ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಜೆಮಿಮಾಗೆ ನಾಯಕತ್ವ ಸಿಗುವ ಸಾಧ್ಯತೆ ಇದೆ.
2023 ರಲ್ಲಿ ನಡೆದ ಮೊದಲ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಸೇರಿಕೊಂಡಿದ್ದ ಜೆಮಿಮಾ, ಮುಂದಿನ ಆವೃತ್ತಿಗೆ ದೆಹಲಿ ತಂಡ ಉಳಿಸಿಕೊಂಡ ಐದು ಆಟಗಾರ್ತಿಯರಲ್ಲಿ ಮೊದಲಿಗರಾಗಿದ್ದರು. ಇನ್ನುಳಿದಂತೆ ಶಫಾಲಿ ವರ್ಮಾ, ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ) ಮತ್ತು ಅಂಡರ್-19 ವಿಶ್ವಕಪ್ ವಿಜೇತ ನಾಯಕಿ ನಿಕ್ಕಿ ಪ್ರಸಾದ್ ಸಹ ಇದ್ದಾರೆ.

