ಇನ್ಮುಂದೆ ಸಿಕ್ ಸಿಕ್ಕಲ್ಲಿ ಕಸ ಸುರ್ದು ಬೆಂಕಿ ಹಚ್ಚಿದ್ರೆ ಜೈಲುಪಾಲಾಗ್ತೀರಾ ಹುಷಾರ್! ಯಾಕಂದ್ರೆ ಇದೀಗ ಕಸಕ್ಕೆ ಬೆಂಕಿ ಹಾಕುವವರ ಮೇಲೆ ಎಫ್ಐಆರ್ ಫೈಲ್ ಮಾಡಿ ಜೈಲಿಗೆ ಕಳಿಸಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈ ಬಗ್ಗೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಎಲ್ಲೆಂದ್ರಲ್ಲಿ ಕಸಕ್ಕೆ ಬೆಂಕಿ ಹಚ್ಚುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನು ತಡೆಗಟ್ಟಲು BSWML ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವೇಳೆ ಕಸ ಸುರಿದು ಬೆಂಕಿ ಹಾಕಿದರೆ ಮೊದಲು ದಂಡ ಪ್ರಯೋಗ ಮಾಡಲಿದೆ. ನಂತರ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಿದೆ. ಕಸ ಸುಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಘನತ್ಯಾಜ್ಯ ಘಟಕದ ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಚ್ಚುವವರ ವಿಡಿಯೋ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿ, ಪುರಾವೆಗಳ ಅಧಾರದ ಮೇಲೆ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಿಸಿ. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿ ಕೇಸ್ ದಾಖಲಿಸಿ ಎಂದು ಸೂಚನೆ ನೀಡಲಾಗಿದೆ. ಮೊದಲ ಬಾರಿ ಕಸಕ್ಕೆ ಬೆಂಕಿಯಿಟ್ಟರೆ 10 ಸಾವಿರ ರೂಪಾಯಿ ದಂಡ. ಎರಡನೇ ಬಾರಿ 20 ಸಾವಿರ ರೂಪಾಯಿ ದಂಡ. ನಂತರ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತೆ. ಇದಕ್ಕೂ ಕ್ಯಾರೇ ಎನ್ನದಿದ್ದರೆ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು BSWML ಮಾಹಿತಿ ನೀಡಿದೆ. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿಯಲ್ಲಿ ಕೇಸ್ ದಾಖಲಾದರೆ 6 ತಿಂಗಳಿಂದ 6 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸದ್ಯ ಕಸ ಸುರಿದು ಬೆಂಕಿ ಹಚ್ಚಿದ ಪ್ರಕರಣಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರ್ಗವಣೆ ಮಾಡಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮ ಮುಂದಾಗಿದೆ ಎನ್ನಲಾಗಿದೆ.
ಕಸಕ್ಕೆ ಬೆಂಕಿ ಇಟ್ರೆ ಜೈಲೂಟ ಫಿಕ್ಸ್!

