ಮುಷ್ತಾಕ್ ಅಲಿ ಟ್ರೋಫಿಗೆ ಜಾರ್ಖಂಡ್ ತಂಡ ಮೊದಲ ಬಾರಿಗೆ ಕಪ್ ಗೆ ಮುತ್ತಿಕ್ಕಿದೆ. ನಾಯಕ ಇಶಾನ್ ಕಿಶನ್ ತೋರಿಸಿದ ಭರ್ಜರಿ ಪ್ರದರ್ಶನದಿಂದಾಗಿ ಕಪ್ ಗೆಲ್ಲುವಂತಾಗಿದೆ.
ಫೈನಲ್‌ನಲ್ಲಿ ಹರಿಯಾಣ ತಂಡವನ್ನು ಜಾರ್ಖಂಡ್ 69 ರನ್ ಗಳಿಂದ ಸೋಲಿಸಿದೆ. ಇಶಾನ್ ಕಿಶನ್ ಕೇವಲ 45 ಎಸೆತಗಳಲ್ಲಿ ಬರೋಬ್ಬರಿ 101 ರನ್ ಗಳಿಸಿ ತಂಡದ ಗೆಲುವಿನಲ್ಲಿ ಶ್ರಮ ವಹಿಸಿದರು. ಈಶಾನ್ ಕಿಶನ್ ಅವರ ಶತಕದ ನೆರವಿನಿಂದಾಗಿ ಜಾರ್ಖಂಡ್ ತಂಡ ಬರೋಬ್ಬರಿ 262 ರನ್ ಗಳಿಸುವಂತಾಯಿತು. ಗುರಿ ಬೆನ್ನಟ್ಟಲು ವಿಫಲವಾದ ಹರಿಯಾಣ ತಂಡ ಸೋಲೋಪ್ಪಿಕೊಂಡಿತು. ಅನುಕುಲ್ ರಾಯ್ ಅವರ ಆಲ್‌ರೌಂಡ್ ಪ್ರದರ್ಶನ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಮೂಲಕ ಜಾರ್ಖಂಡ್ ತಂಡ ಐತಿಹಾಸಿಕ ಜಯ ಸಾಧಿಸಿತು.
ಇನ್ನು ಶತಕ ಸಿಡಿಸಿದ ಇಶಾನ್ ಕಿಶನ್(Ishan Kishan) ಅವರ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಜಾರ್ಖಂಡ್ ತಂಡವು 262 ರನ್‌ಗಳ ದಾಖಲೆಯ ರನ್ ಗಳಿಸಿತ್ತು. ಈ ಗುರಿ ಬೆನ್ಈನಟ್ಟಿದ ಹರಿಯಾಣ ತಂಡವು ಕೇವಲ 193 ರನ್ ಗಳನ್ನು ಮಾತ್ರ ಗಳಿಸಿ ಶರಣಾಗತವಾಯಿತು. ಜಾರ್ಖಂಡ್ ತಂಡಕ್ಕೆ ಮೊದಲ ಓವರ್ನಲ್ಲೇ ಆಘಾತ ಎದುರಾಯಿತು. ಆರಂಭಿಕ ವಿರಾಟ್ ಸಿಂಗ್ ಮೊದಲ ಓವರ್‌ನಲ್ಲೇ ಔಟಾದರು. ಇನ್ನೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್, ಕುಮಾರ್ ಕುಶಾಗ್ರ ಅವರ ಜೊತೆಗೂಡಿ ಎರಡನೇ ವಿಕೆಟ್‌ಗೆ 177 ರನ್‌ಗಳ ಜೊತೆಯಾಟ ನೀಡಿದರು.
ನಾಯಕ ಇಶಾನ್ ಕಿಶನ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದರೆ, ಶತಕದಂಚಿನಲ್ಲಿದ್ದ ಕುಶಾಗ್ರ 81 ರನ್ ಗಳಿಗೆ ಔಟ್ ಆದರು. ಅನುಕುಲ್ ರಾಯ್ ಮತ್ತು ರಾಬಿನ್ ಮಿಂಜ್ ಕೇವಲ 32 ಎಸೆತಗಳಲ್ಲಿ 75 ರನ್ ಗಳಿಸಿ ತಂಡದ ಮೊತ್ತ 262 ರನ್ ಆಗುವಂತೆ ಮಾಡಿದರು. ಮಿನ್ಸ್ 14 ಎಸೆತಗಳಲ್ಲಿ 31 ರನ್ ಗಳಿಸಿದರೆ, ರಾಯ್ 20 ಎಸೆತಗಳಲ್ಲಿ 40 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಹರಿಯಾಣ ತಂಡವು ಕೂಡ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್‌ಗೆ ನಾಯಕ ಅಂಕಿತ್ ಕುಮಾರ್ ಸೇರಿದಂತೆ ಎರಡು ವಿಕೆಟ್ ಕಳೆದುಕೊಂಡು ಆರಂಭದಲ್ಲಿಯೇ ಆತ್ಮವಿಶ್ವಾಸದಿಂದ ಕುಗ್ಗಿತು. ಈ ವೇಳೆ ಎಡಗೈ ವೇಗಿ ವಿಕಾಸ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು.
ಆದರೂ ಯಶವರ್ಧನ್ ದಲಾಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸುವುದರ ಮೂಲಕ ಪ್ರತಿರೋಧ ತೋರುವ ವಿಶ್ವಾಸ ಮೂಡಿಸಿದರು. ನಿಶಾಂತ್ ಸಿಂಧು ಮತ್ತು ಸಮಂತ್ ಜಖರ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಆದರೆ, ಮೂವರೂ ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ವಿಫಲರಾದರು.
ಎಡಗೈ ವೇಗಿ ಸುಶಾಂತ್ ಮಿಶ್ರಾ ನಾಲ್ಕು ಓವರ್‌ಗಳಲ್ಲಿ 27 ರನ್ ನೀಡಿ ಮೂರು ವಿಕೆಟ್ ಗಳಿಸಿದರು. ಸಾಥ್ ನೀಡಿದ ಅನುಕುಲ್ ರಾಯ್ ಕೂಡ 42 ರನ್ ನೀಡಿ 2 ವಿಕೆಟ್ ಪಡೆದರು. ಅಂತಿಮವಾಗಿ ತಂಡವು 18.3 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 193 ರನ್ ಗಳಿಗೆ ಆಲೌಟ್ ಆಯಿತು.

