ಬೆಂಗಳೂರು, ಮಾ.07: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ದಿನೇ ದಿನೇ ನಡುವೆ ಭೀಕರ ಸ್ವರೂಪ ಪಡೆಯುತ್ತಿರುವ ಬೆನ್ನಲೆ ಇಂಧನ ಬೆಲೆಗಳು ದಿಢೀರ್ ಏರಿಕೆಯಾಗಿದ್ದು, ತೈಲ ಕಂಪನಿಗಳು ಈ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸಿವೆ. ಇದರಿಂದ ಭಾರತದಲ್ಲಿ ಗೃಹಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಭಾರೀ ಏರಿಕೆಯಾಗಿವೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಿದ್ದು, ನೂತನ ದರಗಳ ಪ್ರಕಾರ ಗೃಹಬಳಕೆಯ ಸಿಲಿಂಡರ್ 60ರೂ. ಮತ್ತು ವಾಣಿಜ್ಯ ಸಿಲಿಂಡರ್ ಮೇಲೆ 115 ರೂ. ಏರಿಕೆ ಮಾಡಲಾಗಿದೆ.
ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ. 913 ಆಗಿದ್ದು, ಈ ಹಿಂದೆ ರೂ. 853 ಬೆಲೆ ಇತ್ತು. 11 ತಿಂಗಳಲ್ಲಿ ಎಲ್‌ಪಿಜಿ ಬೆಲೆಯಲ್ಲಿ ಎರಡನೇ ಬಾರಿ ಏರಿಕೆಯಾಗಿದೆ.
ದೇಶದ ಪ್ರಮುಖ ಮೆಟ್ರೋ ನಗರಗಳಾದ ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. 852.50 ರಿಂದ ರೂ. 912.50ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ರೂ. 879 ರಿಂದ ರೂ. 930ಕ್ಕೆ ಏರಿದ್ದರೆ, ಚೆನ್ನೈನಲ್ಲಿ ರೂ.868.50 ರಿಂದ ರೂ.928.50ಕ್ಕೆ ಹೆಚ್ಚಳವಾಗಿದೆ. ಇನ್ನು ಬೆಂಗಳೂರಿನಲ್ಲಿ ರೂ.855.50 ಇದ್ದ ಬೆಲೆ ರೂ. 915.50ಕ್ಕೆ ತಲುಪಿದೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಸಂಘರ್ಷದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಈ ಹಿನ್ನೆಲೆ ದೇಶದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಸರ್ಕಾರ ಶುಕ್ರವಾರ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳಿಗೆ ಕೇಳಿದ ನಂತರ ಬೆಲೆ ಏರಿಕೆ ಮಾಡಲಾಗಿದೆ.
ದೇಶೀಯ ಪೂರೈಕೆಯನ್ನು ಸುಗಮಗೊಳಿಸಲು, ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಸರ್ಕಾರವು ತುರ್ತು ಆದೇಶವನ್ನು ಜಾರಿಗೊಳಿಸಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ತೈಲ ಸಂಸ್ಕರಣಾ ಕಂಪನಿಗಳು ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 2024 ರ ಮಾರ್ಚ್‌ನಲ್ಲಿ ಇಳಿಕೆ ಮಾಡಲಾಗಿತ್ತು. ಆಗ ಕೇಂದ್ರ ಸರ್ಕಾರವು ಎರಡೂ ಇಂಧನಗಳ ಮೇಲೆ ಪ್ರತಿ ಲೀಟರ್‌ಗೆ ರೂ.2 ದರ ಕಡಿತವನ್ನು ಘೋಷಿಸಿತ್ತು.

