ಬೆಂಗಳೂರು, ಡಿ.16 : ಅಬುದಾಬಿಯಲ್ಲಿ ಬಹುನಿರೀಕ್ಷಿತ ಐಪಿಎಲ್ 2026ರ ಹರಾಜು ಪ್ರಕ್ರಿಯೆ ನಡೆದಿದ್ದು. ಈ ಹರಾಜಿನಲ್ಲಿ ಎಲ್ಲರ ಗಮನ ಸೆಳೆದಿದ್ದು ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಕ್ಯಾಮರೂನ್ ಗ್ರೀನ್. ಹೌದು, ಇವರು ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಎಲ್ಲರ ಊಹೆಯಂತೆಯೇ ಇವರು ಈ ಬಾರಿಯ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದ್ದಾರೆ. ಹರಾಜು ವೇಳೆ ಇವರನ್ನು ಖರೀದಿಸಲು ಭಾರೀ ಪೈಪೋಟಿ ಕಂಡು ಬಂದಿದ್ದು, ಕೊನೆಗೆ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸಫಲವಾಗಿದೆ.
ಸಿಎಸ್‌ಕೆ ಮತ್ತು ಕೆಕೆಆರ್ ನಡುವೆ ತೀವ್ರ ಹಣಾಹಣಿ ನಡೆದು ಕೊನೆಗೆ ಬರೋಬ್ಬರಿ 25.20 ಕೋಟಿ ರೂಪಾಯಿಗಳಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಆಲ್‌ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗ್ರೀನ್ ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಗ್ರೀನ್, 2024 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದರು. ಇದೀಗ ಮೂರನೇ ತಂಡವಾಗಿ ಕೆಕೆಆರ್ ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನೂ ಮಹೇಶ್ ಪತಿರಾಣ 18 ಕೋಟಿಗೆ ಇದೇ ಕೆಕೆಆರ್ ಪಾಲಾಗಿದ್ದು, ಈ ಹರಾಜಿನಲ್ಲಿ ಎರಡನೇ ದುಬಾರಿ ಆಟಗಾರನಾಗಿದ್ದಾರೆ.. ಎರಡೂ ದುಬಾರಿ ಆಟಗಾರರನ್ನು ಕೆಕೆಆರ್ ಖರೀದಿಸಿರೋದು ವಿಶೇಷ
IPL Auction : ದಾಖಲೆ ಬೆಲೆಗೆ KKR ಪಾಲಾದ ಕ್ಯಾಮರೂನ್

