ಪರಿಶಿಷ್ಟ ಜಾತಿಯಲ್ಲಿ (SC) ಒಳಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ ದಾಸ್ ಆಯೋಗ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದೆ. ಆಯೋಗವು ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಸೇರಿದಂತೆ ಸುಮಾರು 1,766 ಪುಟಗಳು ಮತ್ತು ಆರು ಶಿಫಾರಸುಗಳನ್ನೊಳಗೊಂಡ ವರದಿಯನ್ನು ನೀಡಿದೆ. 2025 ಮೇ 5 ರಿಂದ ಜುಲೈ 6 ರ ವರೆಗೆ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.




ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಳ ಮೀಸಲಾತಿ ವರದಿ ಕೊಟ್ಟಿದ್ದಾರೆ. ಆ.7ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಇಂದು ನಾಗಮೋಹನ್ ದಾಸ್ ಟೀಂ ಬಂದು ವರದಿ ಸಲ್ಲಿಕೆ ಮಾಡಿದೆ. ಅದರಲ್ಲಿ ಏನಿದೆ ಅಂತ ಇನ್ನೂ ನೋಡಿಲ್ಲ. ಆ.7ರಂದು ಕ್ಯಾಬಿನೆಟ್ ಮೀಟಿಂಗ್ ಇದೆ. ಅದರಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ. ಬಳಿಕ ಹೇಳುತ್ತೇವೆ ಎಂದರು.
ಈ ವಿಚಾರವಾಗಿ ಮಾತನಾಡಿದ ಸಚಿವ ಜಿ.ಪರಮೇಶ್ವರ, ಐತಿಹಾಸಿಕ ಒಳಮೀಸಲಾತಿ ವರದಿಯನ್ನು ನಾಗಮೋಹನ್ ದಾಸ್ ಸಿಎಂಗೆ ಒಪ್ಪಿಸಿದ್ದಾರೆ. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಇಡಲಾಗುತ್ತದೆ. ಅದನ್ನು ಅನುಷ್ಠಾನ ಮಾಡುವುದಕ್ಕೆ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ವರದಿ ಜಾರಿ ಆಗುತ್ತೆ ಎಂಬ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.
ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ವರದಿ ಸ್ವಿಕಾರ ಆಗಿದೆ. ಆ.7 ರಂದು ಕ್ಯಾಬಿನೆಟ್ನಲ್ಲಿ ಚರ್ಚೆಗೆ ಬರುತ್ತದೆ. ಎಸ್.ಎಂ.ಕೃಷ್ಣ ಅವರು ಆಯೋಗ ನೇಮಕ ಮಾಡಿದ್ರು. ಅಲ್ಲಿಂದ ಇಲ್ಲಿಯವರೆಗೂ ಆಯೋಗಗಳು ಬದಲಾವಣೆ ಆಗಿವೆ. ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ತಿರಸ್ಕಾರ ಮಾಡಿದ್ರೂ ಜನರಿಗೆ ಮೋಸ ಮಾಡಲು ಒಳಮೀಸಲಾತಿ ಜಾರಿ ಮಾಡ್ತೀವಿ ಎಂದು ಹೇಳಿದ್ರು. ಇವತ್ತು ವರದಿ ಬಂದಿದೆ ಅದನ್ನ ಜಾರಿಗೆ ತರೋದಕ್ಕೆ ಬದ್ಧವಾಗಿದ್ದೇವೆ. ನಾಗಮೋಹನ್ ದಾಸ್ ಅವರ ತಂಡ ಅಲ್ಪಾವಧಿಯಲ್ಲಿ ವರದಿ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಇನ್ನೂ ವರದಿ ಸ್ವೀಕಾರದ ವೇಳೆ ಹಿರಿಯ ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ, ಆರ್.ಬಿ ತಿಮ್ಮಾಪುರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
