ಟೆಸ್ಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2025-27) ತಲುಪಬೇಕಾದರೆ ಭಾರತ ತಂಡ (Team India) ಹೆಚ್ಚು ಪ್ರಯಾಸಪಡಬೇಕಾಗುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿರುವ ನ್ಯೂಜಿಲೆಂಡ್ ಅಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಅಗ್ರ-ಎರಡನೇ ಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಆರು ಪಂದ್ಯಗಳನ್ನಾಡಿ ಎಲ್ಲ ಪಂದ್ಯಗಳಲ್ಲಿ ಗೆದ್ದು ಅಗ್ರ ಸ್ಥಾನ ಅಲಂಕರಿಸಿದೆ. ಭಾರತದ ವಿರುದ್ಧ ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ ಕೂಡ ಮೂರನೇ ಸ್ಥಾನದಲ್ಲಿದೆ.
ಭಾರತ ತಂಡ 9 ಟೆಸ್ಟ್ ಪಂದ್ಯಗಳನ್ನಾಡಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿ, ನಾಲ್ಕರಲ್ಲಿ ಹೀನಾಯ ಸೋಲು ಕಂಡಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಪಾಯಿಂಟ್‌ಗಳ ಪಟ್ಟಿಯಲ್ಲಿ 57 ಅಂಕಗಳನ್ನು ಮತ್ತು 48.15 ರ ಗೆಲುವಿನ ಶೇಕಡಾವಾರು ಹೊಂದಿದೆ. ಹೀಗಾಗಿ ಫೈನಲ್ ತಲುಪಬೇಕಾದರೆ ಭಾರತ ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿದೆ.
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನಲ್ಲಿ ಭಾರತ ತಂಡವು ತನ್ನ ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಶ್ರೀಲಂಕಾ ವಿರುದ್ಧ ತವರಿನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಅಂತಿಮ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಆಡಲಿದೆ. ಇದರಲ್ಲಿ ಎರಡೂ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಫೈನಲ್ ತಲುಪಬೇಕಾದರೆ ಭಾರತ ತಂಡವು, ಶ್ರೀಲಂಕಾವನ್ನು ತವರಿನಲ್ಲಿ 2-0 ಅಂತರದಿಂದ ಸೋಲಿಸಬೇಕಾಗುತ್ತದೆ. ನ್ಯೂಜಿಲೆಂಡ್ ವಿರುದ್ಧ 1-1 ಅಂತರದಿಂದ ಡ್ರಾ ಮಾಡಿಕೊಂಡರೂ ನಡೆಯತ್ತೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲುವ ಮೂಲಕ, ಕನಿಷ್ಠ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು. ಅಂದಾಗ ಮಾತ್ರ ಫೈನಲ್ ತಲುಪಬಹುದು.
