ವಿಶಾಖಪಟ್ಟಣ: ಭಾರತೀಯ ಕ್ರಿಕೆಟ್ ತಂಡಕ್ಕೆ ಇದೊಂದು ಗೆಲುವು ಬರೋಬ್ಬರಿ ಎರಡು ವರ್ಷಗಳ ನಂತರ ಸಿಕ್ಕಿದ್ದು, ಈಗ ಅದೊಂದು ಕಳವಳ ದೂರಾಗಿದೆ. ಇದೇನಪ್ಪಾ! ಕ್ರಿಕೆಟ್ ತಂಡ ಸೋಲಿಗಿಂತ ಹೆಚ್ಚು ಗೆಲುವು ಸಾಧಿಸಿದೆ. ಉತ್ತಮ ಪ್ರದರ್ಶನ ತೋರಿಸುತ್ತಿದೆ. ಇದ್ಯಾವ ಗೆಲುವು ಅಂತೀರಾ?
ಹೌದು! ಬರೋಬ್ಬರಿ 2 ವರ್ಷಗಳ ನಂತರ ಭಾರತ ತಂಡ ಟಾಸ್ ಗೆದ್ದಿದೆ. ಅದು ಬರೋಬ್ಬರಿ 20 ಪಂದ್ಯಗಳಲ್ಲಿ ಟಾಸ್ (Toss) ಸೋತ ನಂತರ ಈಗ 21ನೇ ಪಂದ್ಯದಲ್ಲಿ ಟಾಸ್ ಗೆದ್ದಿದೆ. ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲುವ ಮೂಲಕ ತನ್ನ ಕಳವಳವನ್ನು ದೂರ ಮಾಡಿಕೊಂಡಿದೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ನಾಣ್ಯ ಚಿಮ್ಮಿಸಿ ಹೆಡ್ ಎಂದು ಕಾಲ್ ಮಾಡಿದರು. ಹೆಡ್ ಬಿದ್ದ ಕೂಡಲೇ ಕೆಎಲ್ ರಾಹುಲ್ ನಕ್ಕು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಭಾರತ ತಂಡವು ಈ ಹಿಂದೆ ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ 2023ರ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟಾಸ್ ಗೆದ್ದಿತ್ತು. ಆನಂತರ ನಂತರ ಇಲ್ಲಿಯವರೆಗೆ ಅಂದರೆ ಬರೋಬ್ಬರಿ 20 ಪಂದ್ಯಗಳಲ್ಲಿ ಟಾಸ್ ಸೋತಿತ್ತು.
ಕೊನೆಯ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿರುವುದರಿಂದಾಗಿ ಇಂದು ಭಾರತ ತಂಡ ಗೆಲ್ಲುವ ಉತ್ಸುಕತೆಯಿಂದ ಕಣಕ್ಕೆ ಇಳಿದಿದೆ. ಇದಕ್ಕೂ ಮುನ್ನ ನಡೆದ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಟಾಸ್ ಸೋತು, ಮೊದಲು ಬ್ಯಾಟಿಂಗ್ ಮಾಡಿತ್ತು. ಮೊದಲ ಪಂದ್ಯದಲ್ಲಿ 17 ರನ್ ಗಳ ರೋಚಕ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ 4 ವಿಕೆಟ್ ಗಳ ಸೋಲು ಕಂಡಿತ್ತು.
20 ಪಂದ್ಯಗಳ ಸುದೀರ್ಘ ಟಾಸ್ ಫೇಲ್ಗೆ ಬ್ರೇಕ್ ಹಾಕಿದ ಭಾರತ, ಸೋಲಿಗೂ ಬ್ರೇಕ್ ಹಾಕಿ ಕಪ್ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಇಂದಿನ ಪಂದ್ಯದಲ್ಲಿ ಬದಲಾವಣೆ ಕೂಡ ಆಗಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಪ್ರಸಿದ್ಧ್ ಕೃಷ್ಣ ಇಂದು ಕಣಕ್ಕೆ ಇಳಿದಿದ್ದಾರೆ.
