BosstvKannada

ಮಧ್ಯಪ್ರಾಚ್ಯ ಯುದ್ಧದಿಂದ ಭಾರತಕ್ಕೆ ತಲೆನೋವು; ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ!

ಬೆಂಗಳೂರು, ಮಾ.20: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿ ಭಾರತೀಯ ರೂಪಾಯಿ ಮೌಲ್ಯ ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದು, ಡಾಲರ್ ಎದುರು 93.16ಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ಕಚ್ಚಾ ತೈಲದ ಬೆಲೆ ಏರಿಕೆ ಬೆನ್ನಲೆ ರೂಪಾಯಿ ಮೌಲ್ಯ ಕುಸಿತ ಆಗಿರೋದ್ರಿಂದ ಇದು ಐತಿಹಾಸಿಕ ಕುಸಿತ ಎಂದು ಹೇಳಲಾಗುತ್ತಿದೆ.

ಕಚ್ಚಾ ತೈಲದ ಬೆಲೆ ಈಗಾಗಲೇ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಯುದ್ಧ ಹೀಗೆಯೇ ಮುಂದುವರಿದರೆ 180-200 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಮತ್ತು ಇರಾನ್‌ನಂತಹ ದೇಶಗಳು ಎಚ್ಚರಿಕೆ ನೀಡಿವೆ. ಮತ್ತೊಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು 93ರ ಗಡಿ ದಾಟಿರುವುದು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದೆ. ರೂಪಾಯಿ ಮೌಲ್ಯ ಕುಸಿದಾಗ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ.

ಪ್ರಮುಖ ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ. ಇದರಿಂದಾಗಿ ಸುರಕ್ಷಿತ ಹೂಡಿಕೆಯಾಗಿರುವ ಅಮೆರಿಕನ್ ಡಾಲರ್ ಮೇಲೆ ಎಲ್ಲರೂ ಅವಲಂಬಿತರಾಗಿದ್ದಾರೆ. ಯುದ್ಧದ ಸನ್ನಿವೇಶದಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಬೆಲೆ ಏರಿಕೆಯಾಗಿದೆ. ಭಾರತ ತನ್ನ ಅಗತ್ಯದ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಹೆಚ್ಚಿನ ಡಾಲರ್ ಪಾವತಿಸಬೇಕಾಗಿ ಬಂದಿದೆ. ಇದು ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತದೆ.

ಭಾರತವು ಶೇ.80ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರೂಪಾಯಿ ಮೌಲ್ಯ ಕುಸಿದಾಗ, ತೈಲ ಕಂಪನಿಗಳು ಹೆಚ್ಚು ಹಣ ಪಾವತಿಸಬೇಕಾಗುತ್ತದೆ, ಇದರಿಂದ ಪೆಟ್ರೋಲ್ ದರ ಏರಿಕೆಯಾಗಬಹುದು.
ಪಾಮ್ ಆಯಿಲ್ ಸೇರಿದಂತೆ ಅನೇಕ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅಡುಗೆ ಎಣ್ಣೆ ಬೆಲೆಯೂ ಏರಿಕೆಯಾಗಲಿದೆ.

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಮತ್ತು ರೆಫ್ರಿಜರೇಟರ್‌ಗಳ ಬಿಡಿಭಾಗಗಳು ವಿದೇಶದಿಂದ ಬರುವುದರಿಂದ ಇವುಗಳ ಬೆಲೆ ಶೇ.5 ರಿಂದ 10ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಡಾಲರ್‌ನಲ್ಲಿ ವ್ಯವಹಾರ ಮಾಡುವುದರಿಂದ ರೂಪಾಯಿ ಕುಸಿತವಾದಾಗ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ.

ಇನ್ನು, ಇವುಗಳ ಜೊತೆಗೆ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಫೀಸ್ ಮತ್ತು ಪ್ರವಾಸದ ಖರ್ಚು ಡಾಲರ್ ಲೆಕ್ಕದಲ್ಲಿರುವುದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಲಿದೆ. ರೂಪಾಯಿ ಮೌಲ್ಯ ಕುಸಿತದಿಂದ ಸಾರಿಗೆ ವೆಚ್ಚ (ಇಂಧನ ಬೆಲೆ) ಏರುವುದರಿಂದ ತರಕಾರಿ, ಬೇಳೆ, ಕಾಳು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತದೆ. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಉತ್ಪಾದನಾ ವಲಯದ ಕಂಪನಿಗಳ ಲಾಭ ಕಡಿಮೆಯಾಗುತ್ತದೆ. ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆದ ಕಂಪನಿಗಳಿಗೆ ಬಡ್ಡಿ ಪಾವತಿಸುವುದು ದುಬಾರಿಯಾಗುತ್ತದೆ.

Exit mobile version