ಮಾಜಿ ಸಚಿವ ಬಿಜೆಪಿ ಸಂಸದ ಸುಧಾಕರ್ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಬಾಬು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕನಾಗಿದ್ದ ಬಾಬು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತಿ ಸಭಾಂಗಣದ ಹಿಂಭಾಗದಲ್ಲಿರುವ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಂಸದ ಕೆ.ಸುಧಾಕರ್‌, ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಹೆಸರು ಯಾಕೆ ಉಲ್ಲೇಖ ಮಾಡಿದ್ದಾರೆ ಎಂಬುದೂ ಗೊತ್ತಿಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಆರೋಪವನ್ನ ತಳ್ಳಿ ಹಾಕಿದ್ದಾರೆ.

ಜಿಲ್ಲಾ ಪಂಚಾಯಿತಿ ಸಿಇಎ ಅವರ ಕಾರು ಚಾಲಕ ಡೆತ್‌ನೋಟ್‌ನಲ್ಲಿ ತಮ್ಮ ಹೆಸರು ಬರೆದಿಟ್ಟು ನೇಣಿಗೆ ಶರಣಾದ ಬಗ್ಗೆ ಅವರು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಬು ಆತ್ಮಹತ್ಯೆ ನನಗೆ ನೋವು ತಂದಿದೆ. ನನಗೆ ಬಾಬು ಎಂಬ ವ್ಯಕ್ತಿ ಗೊತ್ತಿಲ್ಲ. ನಾನು ಆತನ ಮುಖ ಸಹ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾಗೇಶ್ ಅವರ ಮಾವ ಚಿಕ್ಕಾಡಗನಹಳ್ಳಿ ಕೃಷ್ಣಮೂರ್ತಿಯ ಪರಿಚಯ ಇದೆ ಎಂದಿದ್ದಾರೆ.

ಬಾಬು ಕುಟುಂಬದವರು ದೂರು ಕೊಡಲು ಠಾಣೆಗೆ ಹೋದಾಗ ಅಲ್ಲಿನ ಪಿಎಸ್‌ಐ ಡೆತ್‌ನೋಟ್‌ನಲ್ಲಿರುವಂತೆ ದೂರು ಕೊಡಿ ಎಂದಿದ್ದಾರೆ. ಇದರಲ್ಲಿ ಶಾಸಕರ, ಉಸ್ತುವಾರಿ ಸಚಿವರ ರಾಜಕೀಯ ಇದೆ. ನನ್ನನ್ನೂ ಒಳಗೊಂಡಂತೆ ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲಿ. ಕಾನೂನು ಏನೇ ಇರಲಿ ತನಿಖೆ ಪಾರದರ್ಶಕವಾಗಿರಲಿ. ಇದು ಮಾಧ್ಯಮದ ಟ್ರಯಲ್ ಆಗೋದು ಬೇಡ. ಸರಿಯಾಗಿ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.

ದೆಹಲಿಯಿಂದ ವಾಪಾಸ್ಸಾದ ಬಳಿಕ ಮೃತನ ಕುಟುಂಬ ಸದಸ್ಯರನ್ನು ನಾನು ಭೇಟಿ ಮಾಡುತ್ತೇನೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಇದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಶಾಸಕರ ಹೆಸರು ಬಂದ್ರೆ ಒಂದು ಕಾನೂನು. ಬಿಜೆಪಿ ಶಾಸಕರು, ಸಂಸದರು ಹೆಸರು ಬಂದ್ರೆ ಬೇರೆ ಕಾನೂನು. ಬಾಬು ಸಾವನ್ನು ರಾಜಕೀಯ ಕಾರಣಕ್ಕೆ ಎಳೆದು ತರುವುದು ಸರಿ ಅಲ್ಲ. ಕೊಡಗು ಪ್ರಕರಣದಲ್ಲಿ ಶಾಸಕರ ಹೆಸರು ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

Share.
Leave A Reply