BosstvKannada

ಪ್ರಧಾನಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದವನು ನಾನು : ಡಿಕೆಶಿ

ಬೆಂಗಳೂರು : ಈ ಸರ್ಕಾರ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ನಿಲ್ಲುತ್ತದೆ. ಈ ಕಾರಣಕ್ಕೆ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025ಕ್ಕೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಸಂವಾದ ನಡೆಸಿ ಮಾತನಾಡಿದರು.

ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್ಮೆಂಟ್ ಮಾಲೀಕ ಎಂದು ಪತ್ರ ಬರೆದಿದ್ದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬಲ್ಲೆವು. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದ್ದು, ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿರುವವನು ನಾನು. ಅವನ್ಯಾರೋ ಹೆಬ್ಬಾರ್ ಎಂಬುವವನಿಗೆ ಹೆದರುತ್ತೇನೆಯೇ? ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ. ಯಾರೇ ಆಗಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಕನಿಷ್ಠ ಪರಿಜ್ಞಾನ ಇಟ್ಟುಕೊಳ್ಳಬೇಕು ಎಂದು ಕಿಡಿಕಾರಿದರು.

ನಾನು ಇರುವುದು ನಿಮಗಾಗಿ. ನಾನು ನಿಮ್ಮನ್ನು ಕರೆದು ಅಭಿಪ್ರಾಯ ಪಡೆಯುವ ಅಗತ್ಯವಿರಲಿಲ್ಲ. ನಾವು ನಿಮ್ಮ ಮೇಲೆ ಪ್ರೀತಿ ವಿಶ್ವಾಸವಿಟ್ಟು ಕರೆದಿದ್ದೇವೆ. ಗಾಂಧೀಜಿ ಒಂದು ಮಾತು ಹೇಳಿದ್ದಾರೆ. ನಿಮ್ಮನ್ನು ನೀವು ನಿಯಂತ್ರಿಸಬೇಕಾದರೆ ನಿಮ್ಮ ಮೆದುಳನ್ನು ಪ್ರಯೋಗಿಸಿ, ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಪ್ರಯೋಗಿಸಿ ಎಂದು. ನಾನು ನನ್ನ ಹೃದಯದಿಂದ ಜನರ ಮನಸ್ಸು ಗೆದ್ದಿದ್ದೇನೆ. ನಾನು ಸತತವಾಗಿ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ನನ್ನ ವಿರುದ್ಧ ಸ್ಪರ್ಧಿಸಿದ್ದರೂ ಜನ ನನಗೆ 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಅಂತರದ ಗೆಲುವು ಎಂದು ತಿಳಿಸಿದರು.

ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂಬುದಷ್ಟೇ ನಮ್ಮ ಆಸೆ. ಅದನ್ನು ಬಿಟ್ಟು ನಿಮ್ಮನ್ನು ಬೇರೆ ಏನು ಕೇಳುತ್ತೇವೆ? ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡಿದ್ದೇವೆ. ಈ ಯೋಜನೆ ಜಾರಿ ಅಸಾಧ್ಯ ಎಂದು ಪ್ರಧಾನಮಂತ್ರಿಗಳು ಹೇಳಿದರು. ಆದರೆ, ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳೇ ಅವರನ್ನು ಕಾಪಾಡುತ್ತಿದೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿ, ಮೊದಲು ನೀರಿನ ಸಂಪರ್ಕ ಪಡೆಯಿರಿ, ಒಂದು ವರ್ಷ ತಡವಾಗಿ ಬೇಕಾದರೆ ಹಣ ಪಾವತಿಸಿ ಎಂದು ಕಾಲಾವಕಾಶವನ್ನು ನೀಡಿದ್ದೇವೆ. ಆರನೇ ಹಂತದ ಯೋಜನೆಗೆ ಯೋಜನೆ ರೂಪಿಸಿದ್ದೇವೆ. ಇದನ್ನು ನೀವುಗಳು ಅರಿಯಬೇಕು. ಎಲ್ಲರನ್ನು ಆಟವಾಡಿಸಿದಂತೆ ನಮ್ಮನ್ನು ಆಟವಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ. ಅಪಾರ್ಟ್‌ಮೆಂಟ್‌ಗಳಿಗೆ ಜಾಗ ಕೊಟ್ಟಿದ್ದೇನೆ. ನಾವು ಇರುವುದೇ ನಿಮ್ಮ ಸೇವೆ ಮಾಡಲು. ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ. ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗೆ ಎಷ್ಟು ಮತ ಬೀಳುತ್ತದೆ ಎಂದೂ ನನಗೆ ಗೊತ್ತಿದೆ. ಆದರೂ ನಾವು ನಿಮ್ಮ ಸೇವೆ ಮಾಡಿ ನಿಮ್ಮ ವಿಶ್ವಾಸ ಗೆಲ್ಲಲು ಬಯಸುತ್ತೇನೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠ, ನೀವು ದುರ್ಬಲರಾದರೆ, ನಾವು ದುರ್ಬಲ ಎಂದು ಭಾವಿಸಿದ್ದೇನೆ. ನಾನು ನೇರವಾಗಿ, ಕಟುವಾಗಿ ಹಾಗೂ ದಿಟ್ಟವಾಗಿ ಮಾತನಾಡಿದ್ದೇನೆ. ಇದಕ್ಕೆ ಯಾರೂ ಬೇಸರ ಮಾಡಿಕೊಳ್ಳಬೇಡಿ. ಬೆದರಿಸಿದರೆ ನಡೆಯುತ್ತದೆ ಎಂಬ ಭ್ರಮೆ ಬೇಡ ಎಂದರು.

Exit mobile version