ನೇಹಾ ಹಿರೀಮಠ್ ಕೊಲೆ ಪ್ರಕರಣದ ಆರೋಪಿ ಫಯಾಜ್ ಇದೀಗ ನಟ ದರ್ಶನ್‌ಗೆ ಜಾಮೀನು ನೀಡಿಲ್ವಾ? ಅದೇ ರೀತಿ ನನಗೂ ಜಾಮೀನು ಕೊಡಿ ಅಂತಾ ದುಂಬಾಲು ಬಿದ್ದಿದ್ದಾನೆ. ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ನಡೀತು.
ಕಳೆದ ವರ್ಷ ಏಪ್ರಿಲ್ 18ರಂದು ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿ ಕಾಲೇಜಿನಿಂದ ಹೊರಬರ್ತಾ ಇದ್ದ ಸಂದರ್ಭದಲ್ಲಿ ಆರೋಪಿ ಫಯಾಜ್ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಹೀಗಾಗಿ ಆತನನ್ನ ಅರೆಸ್ಟ್ ಮಾಡಲಾಗಿತ್ತು. ಇದೀಗ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿದಂತೆ ನನಗೂ ಜಾಮೀನು ನೀಡಿ ಎಂದು ಫಯಾಜ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ಈ ಬಗ್ಗೆ ನೇಹಾ ಹಿರೇಮಠ್ ತಂದೆ ಅಸಮಾಧಾನ ಹೊರಹಾಕಿದ್ದಾರೆ. ದರ್ಶನ್ ತಮ್ಮ ನಟನೆ ಮತ್ತು ಒಳ್ಳೆಯ ಕಾರ್ಯದಿಂದ ಜನರಿಗೆ ಮಾದರಿ ಆಗಬೇಕಿತ್ತು. ಆದರೆ ಹತ್ಯೆ ಪ್ರಕರಣದ ಆರೋಪಿಗಳಿಗೆ ಮಾದರಿಯಾಗ್ತಾ ಇರೋದು ನಿಜಕ್ಕೂ ನೋವು ತಂದಿದೆ. ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಲೆ ಆರೋಪಿ ಫಯಾಜ್ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಜಾಮೀನು ಅರ್ಜಿಯನ್ನ ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯ ವಜಾಗೊಳಿಸಿ ಆಗಸ್ಟ್ ೧೦ ಕ್ಕೆ ವಿಚಾರಣೆ ಮುಂದೂಡಿದೆ.

