ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಕನ್ನಡದ ಖ್ಯಾತ ಕವಿ, ನಾಟಕ ರಚನೆಕಾರರು ಹಾಗೂ ಸಾಹಿತಿ ಎಚ್‌.ಎಸ್ ವೆಂಕಟೇಶ ಮೂರ್ತಿ (HS Venkateshamurthy ) ನಿಧನರಾಗಿದ್ದಾರೆ. ಕರುನಾಡು ಕಂಡ ಹಿರಿಯ ಸಾಹಿತಿ, ಪ್ರಖ್ಯಾತ ಕವಿ ಹೆಚ್.ಎಸ್ ವೆಂಕಟೇಶಮೂರ್ತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ರು.. ಇಂದು ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನಾಡು ಕಂಡ ಹೆಮ್ಮೆಯ ಸಾಹಿತಿಯನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಹೆಚ್ಎಸ್‌ವಿ ಅಂತಲೇ ಚಿರ ಪರಿಚಿತರಾಗಿದ್ದ ಅವರು, ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು, ಸಾಹಿತ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹೆಚ್.ಎಸ್.ವೆಂಕಟೇಶಮೂರ್ತಿ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಹಾಗೂ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ರು.

1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ವೆಂಕಟೇಶಮೂರ್ತಿ ಜನಿಸಿದರು. ಅವರ ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ರು. ಹೆಚ್ಎಸ್‌ವಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂಎ ಪದವಿ ಪಡೆದು ಕೊಂಡಿದ್ದರು.

ಹೆಚ್.ಎಸ್ ವೆಂಕಟೇಶಮೂರ್ತಿ ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ‘ಕನ್ನಡದಲ್ಲಿ ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್​ಡಿ ಪದವಿಯೊಂದಿಗೆ ಡಾಕ್ಟರೇಟ್​ ಪಡೆದುಕೊಂಡಿದ್ದರು. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.

ಹೆಚ್​ಎಸ್​ವಿ ಸುಮಾರು 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ‘ಚಿನ್ನಾರಿ ಮುತ್ತ’, ‘ಕೋಟ್ರೇಶಿ ಕನಸು’, ‘ಅಮೆರಿಕಾ ಅಮೆರಿಕಾ’, ‘ಮೈತ್ರಿ’, ‘ಕಿರಿಕ್ ಪಾರ್ಟಿ’ ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆ ರಚಿಸಿದ್ದರು. ಮುಕ್ತ, ಮಹಾಪರ್ವ ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದರು.

Also Read: Montepadavu landslide case: ಮೊಂಟೆಪದವಿನ ಬಳಿ ಗುಡ್ಡ ಕುಸಿತ ಕುಟುಂಬವೇ ಸರ್ವನಾಶ

ಭಾವಗೀತೆ ಕವಿ ಎಂದೇ ಪ್ರಸಿದ್ಧರಾಗಿದ್ದ HSV ಅವರು ಹಲವು ಜನಪ್ರಿಯ ಸಿನಿಮಾ ಹಾಡುಗಳ ರಚನಾಕಾರರು ಆಗಿದ್ದಾರೆ. ಮಕ್ಕಳಿಗಾಗಿ ಸಾಕಷ್ಟು ಕವಿತೆಗಳನ್ನ ರಚಿಸಿದ್ದಾರೆ. ಇನ್ನು ಇವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಮುಖ್ಯ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.

ಹೆಚ್.ಎಸ್ ವೆಂಕಟೇಶಮೂರ್ತಿ ಅವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7 ಗಂಟೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

Share.
Leave A Reply