Site icon BosstvKannada

ನಿವೃತ್ತ ನ್ಯಾ. ಹೆಚ್​.​ಎನ್.ನಾಗಮೋಹನ್ ದಾಸ್ ನೇತೃತ್ವದ ಒಳಮೀಸಲು ವರದಿ ಅಧ್ಯಯನ ಹೇಗಿತ್ತು?

ರಾಜ್ಯ ಸರ್ಕಾರಕ್ಕೆ ಒಳಮೀಸಲು ಸಮೀಕ್ಷಾ ವರದಿ ಸಲ್ಲಿಕೆ ಆಗಿದೆ. ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್​.​ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಇಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

ಹೇಗಿತ್ತು ಒಳಮೀಸಲಾತಿ ವರದಿ ಅಧ್ಯಯನ
ಜನವರಿ 2025 ರಂದು ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತ್ತು. ರಾಜ್ಯದಲ್ಲಿ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸದಾದ ಸಮೀಕ್ಷೆ ನಡೆಸಬೇಕೆಂದು 27-3-2025 ರಂದು ಆಯೋಗವು ಮಧ್ಯಂತರ ವರದಿ ಸಲ್ಲಿಸಿತ್ತು. ಅದೇ ದಿನವೇ ಸಚಿವ ಸಂಪುಟ ಮಧ್ಯಂತರ ವರದಿಯನ್ನು ಒಪ್ಪಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯಿಸಿತ್ತು.

ಅದರಂತೆ, ಒಳಜಾತಿಗಳ ವರ್ಗೀಕರಣಕ್ಕಾಗಿ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆ, ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ಹಂಚಲಾಗಿದೆ.

ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ರಾಜ್ಯ ಸರ್ಕಾರ ನೀಡಿತ್ತು. ಎಸ್​ಸಿ ಸಮುದಾಯದಲ್ಲಿನ ಅತ್ಯಂತ ಹಿಂದುಳಿದ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ ಈ ಕುರಿತ ಅಂತಿಮ ವರದಿ ಸರ್ಕಾರದ ಕೈ ಸೇರಿದೆ.

Exit mobile version