ನವದೆಹಲಿ: ದೇಶಕ್ಕೆ ನಿರುದ್ಯೋಗ ಸಮಸ್ಯೆ ಒಂದು ಪಿಡುಗಾಗಿದ್ದು, ವಿದ್ಯಾವಂತರು ಉದ್ಯೋಗ ಇಲ್ಲದೆ ಅಲೆದಾಡುವುದು ಸಾಮಾನ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿದೆ ಎಂದು ಅಂಕಿ-ಅಂಶಗಳು ಹೇಳುತ್ತಿದ್ದು, ನಿಟ್ಟುಸಿರು ಬಿಡುವಂತಾಗುತ್ತಿದೆ.
ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿರುವ ವಾರ್ಷಿಕ ಕಾರ್ಮಿಕ ಸಮೀಕ್ಷಾ ವರದಿ (PLFS- Periodic Labour Force Survey)ಯಂತೆ ದೇಶದಲ್ಲಿ ನಿರುದ್ಯೋಗ ದರ (Unemployment rate) ಕಳೆದ 6 ವರ್ಷಗಳಲ್ಲಿ ಗಣನೀಯ ಇಳಿಕೆ ಕಂಡಿದೆ.
2017-18ರಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರ ನಿರುದ್ಯೋಗ ದರ ಶೇ. 6ರಷ್ಟಿತ್ತು. ಅದು 2023-24ಕ್ಕೆ ಶೇ. 3.2ಕ್ಕೆ ಇಳಿದಿದೆ. ಹೀಗಾಗಿ ಕಳೆದ 6 ವರ್ಷಗಳಲ್ಲಿ ನಿರುದ್ಯೋಗ ದರ ಶೇ. 6ರಿಂದ ಶೇ. 3.2ಕ್ಕೆ ಇಳಿದಿರುವುದು ಸಂತಸ ತಂದಿದೆ.
2025ರ ಆಗಸ್ಟ್ ತಿಂಗಳಲ್ಲಿ ಶೇ. 5.1 ನಿರುದ್ಯೋಗ ದರ ಇತ್ತು. ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.2 ಇದೆ. ಈ ಎರಡು ತಿಂಗಳಲ್ಲಿ ಗ್ರಾಮೀಣ ನಿರುದ್ಯೋಗ ಕ್ರಮವಾಗಿ ಶೇ. 4.3 ಮತ್ತು ಶೇ. 4.6 ರಷ್ಟಿದೆ ಎಂದು ದತ್ತಾಂಶ ಹೇಳುತ್ತಿದೆ. ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ, ಯುವಜನರನ್ನು ಉದ್ಯೋಗಕ್ಕೆ ಮತ್ತು ಸ್ವ ಉದ್ಯೋಗಕ್ಕೆ ಅಣಿಗೊಳಿಸಲು ಮುಂದಾಗುತ್ತಿದೆ. ಹೀಗಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿದೆ.

