BosstvKannada

ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಹೊಸಳ್ಳಿ ಗ್ರಾಮಸ್ಥರು! : ಗಣಿಗಾರಿಕೆ ನಿಲ್ಲಿಸಿ ಇಲ್ಲಾ ದಯಾಮರಣಕ್ಕೆ ಅವಕಾಶ ನೀಡಿ!

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಹಾವಳಿ ಮಿತಿ ಮೀರಿದೆ. ಇದರಿಂದ ಆಕ್ರೋಶಗೊಂಡ ಹೊಸಳ್ಳಿ ಗ್ರಾಮಸ್ಥರು, ಅಧಿಕಾರಿಗಳು ಮುಂದೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೊಸಳ್ಳಿ ಗ್ರಾಮದಲ್ಲಿ ತಹಶೀಲ್ದಾರ್‌ ಕೆ.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು. ಗ್ರಾಮದಲ್ಲಿ 17 ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈ ಪೈಕಿ ಬಹುತೇಕ ಅಕ್ರಮ ಅಂತಾ ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಲೋಕಾಯುಕ್ತ, ಇತರ ಇಲಾಖೆಗೆ ದೂರು ಸಲ್ಲಿಸಿದ್ದು, ಯಾವುದೇ ಕ್ರಮ ಆಗಿಲ್ಲ.. ಅಕ್ರಮ ಗಣಿಗಾರಿಕೆ ನಡೆಸುವವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಅಂತಾ ನೋವು ತೋಡಿಕೊಂಡರು.

ಗ್ರಾಮೀಣ ರಸ್ತೆಯಲ್ಲಿ ಭಾರ ಮಿತಿ ಇಲ್ಲದೆ ಹತ್ತು ಚಕ್ರದ ಟಿಪ್ಪರ್‌ಗಳು ಓಡಾಡುತ್ತಿವೆ. ಸಂಜೆ ಹೊತ್ತಿನಲ್ಲಿ ಕ್ವಾರೆಗಳಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದ್ದು, ಪಕ್ಕದ ಮನೆಗಳು ಬಿರುಕು ಬಿಟ್ಟಿವೆ. ಕ್ರಷರ್ ವ್ಯಾಪಿಸಿದ್ದು, ವ್ಯವಸಾಯ ಮಾಡಲು ಆಗುತ್ತಿಲ್ಲ ಅಂತಾ ದೂರಿದರು. ಈ ಭಾಗದಲ್ಲಿ ಸಿ ಮತ್ತು ಡಿ ವರ್ಗದ ಜಮೀನು ಇದೆ. ಗ್ರಾಮಕ್ಕೆ ಜೇನು ಕಲ್ಲು ಬೆಟ್ಟ ಸಮೀಪವಿದೆ. ಸೂಕ್ಷ್ಮ ಪರಿಸರ ಪ್ರದೇಶ ಅಂತಾ ಗುರುತಿಸಲ್ಪಟ್ಟಿದೆ. ಮೀಸಲು ಅರಣ್ಯಕ್ಕೆ ಹೊಂದಿಕೊಂಡ ಜಾಗದಲ್ಲಿ ಕ್ರಷರ್ ನಡೆಸಲಾಗುತ್ತಿದ್ದು, ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಲಾಗಿದೆ ಅಂತಾ ಆರೋಪಿಸಿದರು.

ಮತ್ತೊಂದೆಡೆ, ಅಕ್ರಮ ಕಲ್ಲು ಗಣಿಗಾರಿಕೆಯಿಂದ ಧೂಳು ವ್ಯಾಪಕವಾಗಿ ಹರಡುತ್ತಿದ್ದು, ಶೇಕಡಾ 90ರಷ್ಟು ಜನರು ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಕಲ್ಲು ಗಣಿಗಾರಿಕೆ ನಿಲ್ಲಿಸಿ ಇಲ್ಲವೇ ದಯಾಮರಣ ನೀಡಿ ಅಂತಾ ಅಧಿಕಾರಿಗಳ ಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಅಲ್ಲದೇ ಗ್ರಾಮಸ್ಥರ ಒತ್ತಾಯದ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್‌, ಖಡಕ್‌ ನಿರ್ಧಾರ ಕೈಗೊಂಡರು. ನಿಯಮ ಬಾಹಿರ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದರು. ಸದ್ಯ ತಹಶೀಲ್ದಾರ್‌ ನಿರ್ಧಾರದಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Exit mobile version