ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆ ಜಾತ್ರೋತ್ಸವ ಹಾಗೂ ಬಾಗಿನ ಅರ್ಪಣಾ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿತು. ಹೊನ್ನಮ್ಮನ ಕೆರೆಯ ದಡದಲ್ಲಿನ ಹೊನ್ನಮ್ಮತಾಯಿ, ಬಸವೇಶ್ವರ ಹಾಗೂ ಗಣಪತಿ ದೇವಾಲಯದಲ್ಲಿ ಬೆಳಗಿನಿಂದಲೇ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ ತಾವುಗಳು ಮನೆಯಿಂದ ಪೂಜಿಸಿ ತಂದ ಬಾಗಿನವನ್ನು ಬಂಗಾರದ ಕಟ್ಟೆಯ ಮೇಲಿಟ್ಟು ಹೊನ್ನಮ್ಮತಾಯಿಗೆ ಅರ್ಪಿಸಿ ಪೂಜೆ ಸಲ್ಲಿಸಿದರು.
ಕೊಡಗಿನ ಮಂಜಿನ ಮಧ್ಯೆ ಹೊನ್ನಮ್ಮತಾಯಿ ಜಾತ್ರೆಯ ಸಡಗರ!
ಬಿದಿರಿನಿಂದ ಹೆಣೆದ ಮೊರದಲ್ಲಿ ಅರಿಶಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಾಚಣಿಕೆ, ಬಳೆ, ಗೌರಿ ಹೂ, ತೆಂಗಿನ ಕಾಯಿ, ಫಲತಾಂಬೂಲ ಒಳಗೊಂಡ ಬಾಗಿನವನ್ನು ಹೊನ್ನಮ್ಮ ತಾಯಿಯ ಕುಟುಂಬಸ್ಥರು ಮೊದಲಿಗೆ ಕೆರೆಯಲ್ಲಿ ಅರ್ಪಿಸಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಜಾತ್ರೋತ್ಸವ ಆಚರಿಸುತ್ತಿದ್ದಾರೆ.. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಎಂಟ್ರಿ ಕೊಡ್ತಿದ್ದಾರೆ. ಹೊನ್ನಮ್ಮನ ಕೆರೆ ವಿಶಾಲವಾಗಿರುವುದರಿಂದ ಪ್ರತಿದಿನ ಬೋಟಿಂಗ್‌ಗೆ ವ್ಯವಸ್ಥೆ ಇರುತ್ತದೆ.
ಶಾಸಕ ಡಾ.ಮಂತರ್‌ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ದೊಡ್ಡಮಳ್ತೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಸೇರಿದಂತೆ ಹಲವರು ಈ ಅಪೂರ್ವ ಗಳಿಗೆಗೆ ಸಾಕ್ಷಿಯಾದರು. ಇನ್ನು, ಇದೇ ವೇಳೆ ಮಾತಾಡಿದ ಶಾಸಕ ಮಂತರ್‌ಗೌಡ, ಪ್ರಸಕ್ತ ವರ್ಷ ವಿಶೇಷ ಅನುದಾನದಲ್ಲಿ 50 ಲಕ್ಷ ರೂಪಾಯಿಗಳನ್ನು ಹೊನ್ನಮ್ಮಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವುದು ಅಂಥಾ ಹೇಳಿದರು.

