ಬೆಂಗಳೂರು: ರಾಜ್ಯ ಸರ್ಕಾರವು ಇಲ್ಲಿಯವರೆಗೆ ಎಸ್ಸೆಸ್ಸೆಲ್ಸಿ ಟಾಪರ್ ಗಳಿಗೆ ಲ್ಯಾಪ್ ಟಾಪ್ ನೀಡುತ್ತಿತ್ತು. ಆದರೆ, ಇನ್ನು ಮುಂದೆ ಟಾಪರ್‌ಗಳಿಗೆ ಲ್ಯಾಪ್‌ಟಾಪ್ ಬದಲಿಗೆ ನಗದು ಬಹುಮಾನ (Cash Prize) ನೀಡಲು ನಿರ್ಧರಿಸಿದೆ.
ಈ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪ್ರತಿ ಜಿಲ್ಲೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್-3 ವಿದ್ಯಾರ್ಥಿಗಳ ಆಧಾರ್ ಲಿಂಕ್ಡ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ 50 ಸಾವಿರ ರೂ. ನಗದು ನೀಡಲಾಗುವುದು. 2024-25ನೇ ಶೈಕ್ಷಣಿಕ ವರ್ಷದಲ್ಲಿ 758 ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (SSP) ಮೂಲಕ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ.
‘ಗುಣಮಟ್ಟದ ಭರವಸೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಉಪಕ್ರಮ’ ಯೋಜನೆಯಡಿ ಸುಮಾರು 325 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಇಲಾಖೆ ಹೇಳಿದೆ. ಮಕ್ಕಳ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ ಈ ವಿಚಾರ ಘೋಷಿಸಿದ್ದರು. ಈಗ ಈ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಬಹುಮಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ಸಿಗಲಿದೆ.

