ಬೆಂಗಳೂರು: ರಾಜ್ಯದ ಗೃಹಲಕ್ಷ್ಮೀಯರಿಗೆ 2 ತಿಂಗಳ ಕಂತು ಹಾಕದೆ ಸರ್ಕಾರ ಯಾಮಾರಿಸುತ್ತಿದೆ ಎಂದು ಅಧಿವೇಶನದಲ್ಲಿ ಬಿಜೆಪಿ ಆರೋಪಿಸಿತ್ತು. ಇದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಈ ವಿಷಯವಾಗಿ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗುರ ಅನುಭವಿಸಿತ್ತು. ಎರಡು ತಿಂಗಳು ಬಾಕಿ ಸೇರಿದಂತೆ ಒಟ್ಟು 3 ತಿಂಗಳ ಕಂತು ಯಜಮಾನಿಯರಿಗೆ ಬರಬೇಕಿದ್ದು, ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 2.6 ಕೋಟಿಗೂ ಅಧಿಕ ಯಜಮಾನಿಯರಿಗೆ ಮುಂದಿನ ವಾರದಲ್ಲಿ ಕಂತು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಮುಂದಿನ ವಾರ, ಸೋಮವಾರದಿಂದ- ಶನಿವಾರದ ಒಳಗೆ 24 ನೇ ಕಂತಿನ ಹಣ ಅಕೌಂಟ್ ಗೆ ಜಮೆ ಆಗಲಿದೆ ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ 24 ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಹೀಗಾಗಿ ಮುಂದಿನ ವಾರದ ಶನಿವಾರದ ಒಳಗೆ ಹಣ ಬಿಡುಗಡೆಯಾಗಲಿದೆ ಎಂದಿದ್ದಾರೆ.
ಯೋಜನೆಯ ಹಣ ಸತ್ತವರ ಅಕೌಂಟ್ ಗಳಿಗೆ ಜಮೆಯಾಗುತ್ತಿರುವ ಕುರಿತು ಮಾತನಾಡಿರುವ ಅವರು, ಈ ಕುರಿತು ಎರಡು ಬಾರಿ ಸಿಎಸ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸತ್ತವರ ಅಕೌಂಟ್ ಗೆ ಹಣ ಹೋಗಿರುವ ಬಗ್ಗೆ ಗೊತ್ತಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಅಳವಡಿಕೆ ಮಾಡಲಾಗಿದೆ. ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲಿಸುತ್ತಾರೆ. ಹೀಗಾಗಿ ಅದನ್ನು ಸದ್ಯಕ್ಕೆ ತಡೆಹಿಡಿದು, ಬ್ಯಾಂಕ್ ಗಳ ಮೂಲಕ ಹಣ ವಾಪಾಸ್ ಪಡೆಯುವ ಹೊಣೆಗಾರಿಕೆ ಬ್ಯಾಂಕ್ ಗಳಿಗೆ ನೀಡಲಾಗಿದೆ ಎಂದಿದ್ದಾರೆ.
ಡಿಕೆಶಿ ಪ್ರಯತ್ನಕ್ಕೆ ಉತ್ತರಿಸಿದ ಅವರು, ನಾವು-ನೀವು ಮಾತನಾಡಿದ ಕೂಡಲೇ ಏನೂ ಆಗುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ.

