Heavy Rain in Udupi: ಉಡುಪಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದಲ್ಲಿ ಹಲವೆಡೆಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ನಗರದ ಹಲವು ಮಳಿಗೆಗೆ ಮಳೆ ನೀರಿನ ಜೊತೆಗೆ ಕೆಸರಿನ ನೀರು ನುಗ್ಗಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಮಳಿಗೆ ಒಳಗೆ ಫ್ರಿಡ್ಜ್, ಕೂಲರ್‌ಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಹಾನಿಗೊಂಡಿವೆ. ರಸ್ತೆ ಹಾಗೂ ಕಟ್ಟಡಗಳ ಪಾರ್ಕಿಂಗ್ ಪ್ರದೇಶಗಳ ಮೇಲೆ ನಡೆದಿರುವ ಗೈರಕಾನೂನು ಒತ್ತುವರಿ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣವೇ ಈ ಪರಿಸ್ಥಿತಿಗೆ ಕಾರಣ ಎಂದು ವ್ಯಾಪಾರಿಗಳು ಕಿಡಿಕಾರಿದ್ದಾರೆ.
ಪೂರ್ವದಲ್ಲಿ 14 ಅಡಿ ಆಳವಿದ್ದ ಚರಂಡಿ ಈಗ ನಾಲ್ಕು ಅಡಿಗೆ ಕುಸಿದಿದ್ದು, ಮಳೆಯ ನೀರು ಹರಿಯುವ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಏಕಾಏಕಿ ಸುರಿದ ಗಾಳಿ ಮಳೆಯೊಂದಿಗೆ ತಗ್ಗು ಪ್ರದೇಶಗಳಿಗೆ ಕೆಸರು ನೀರು ನುಗ್ಗಿ ಮನೆಗಳು ಮತ್ತು ಅಂಗಡಿಗಳನ್ನು ಜಲಾವೃತಗೊಂಡಿದೆ..
ಮಣಿಪಾಲ (Manipal) ಮತ್ತು ಪರ್ಕಳ ಪ್ರದೇಶಗಳಲ್ಲೂ ಭಾರಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ.. ಬೆಟ್ಟದ ಮೇಲಿಂದ ಹರಿದ ನೀರು ಇಳಿಜಾರು ಪ್ರದೇಶಗಳಿಗೆ ದೂಡಿಕೊಂಡು ಬಂದಿದ್ದು, ಮಣಿಪಾಲ–ಲಕ್ಷ್ಮೀಂದ್ರ ನಗರ ರಸ್ತೆಯನ್ನು ಸಂಪೂರ್ಣ ಜಲಾವೃತಗೊಳಿಸಿದೆ. ಈ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ಜನರು ಪರದಾಡುವ ಪರಿಸ್ಥಿತಿ ಎದುರಾಯಿತು..
ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂತಹ ಸಮಸ್ಯೆಗಳು ಕಂಡುಬರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಲಿನ ಬಹುಮಹಡಿ ಕಟ್ಟಡಗಳ ಅವ್ಯವಸ್ಥಿತ ನಿರ್ಮಾಣಗಳು ನೈಸರ್ಗಿಕ ನೀರಿನ ಹರಿವು ತಡೆಯುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also Read: Flood Threat : ರಾಜ್ಯ ರಾಜಧಾನಿಯ 200 ಏರಿಯಾಗಳಿಗೆ ಪ್ರವಾಹ ಭೀತಿ..!
ಉಡುಪಿ ಶಾಸಕ ಯಶ್‌ಪಾಲ್ (Yashpal) ಸುವರ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಅಧಿಕಾರಿಗಳಿಗೆ, ಎಲ್ಲ ಒತ್ತುವರಿಯಾದ ಪಾರ್ಕಿಂಗ್ ಪ್ರದೇಶಗಳನ್ನು ತಕ್ಷಣ ತೆರವುಗೊಳಿಸಲು ಕಠಿಣ ಸೂಚನೆ ನೀಡಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಿಗೂ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

